ಸಂಗಮೇಶ್ ಅಮಾನತು ಆದೇಶ ಹಿಂಪಡೆಯಲು ಕಾಂಗ್ರೆಸ್ ಪಟ್ಟು: ಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್

Update: 2021-03-05 12:53 GMT

ಬೆಂಗಳೂರು, ಮಾ. 5: ‘ಒಂದು ರಾಷ್ಟ್ರ, ಒಂದು ಚುನಾವಣೆ'ಯ ಚರ್ಚೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿ ಮುಂದುವರಿಸಿದರು. ಅಲ್ಲದೆ, ಕಾಂಗ್ರೆಸ್ ಸದಸ್ಯ ಬಿ.ಕೆ.ಸಂಗಮೇಶ್ ಅವರ ಅಮಾನತು ಹಿಂಪಡೆಯಬೇಕೆಂದು ಪಟ್ಟು ಹಿಡಿದ್ದರಿಂದ ವಿಧಾನಸಭೆಯ ಗದ್ದಲ-ಕೋಲಾಹಲದಲ್ಲೇ ಎರಡನೇ ದಿನದ ಕಲಾಪವೂ ನಡೆಯದೆ ಸಮಯ ವ್ಯರ್ಥವಾಯಿತು.

ಶುಕ್ರವಾರ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧರಣಿಯಲ್ಲಿದ್ದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ಒಂದು ರಾಷ್ಟ್ರ, ಒಂದು ಚುನಾವಣೆ'ಯ ಚರ್ಚೆ ನಡೆಸಬೇಕಿದೆ, ಹೀಗಾಗಿ ಪ್ರತಿಪಕ್ಷ ಸದಸ್ಯರು ತಮ್ಮ ತಮ್ಮ ಸ್ಥಾನಗಳಿಗೆ ತೆರಳಬೇಕು ಎಂದು ಮನವಿ ಮಾಡಿದರು. ಆದರೆ, ಇದಕ್ಕೆ ಆಕ್ಷೇಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಆರೆಸ್ಸೆಸ್ ಅಜೆಂಡಾ ಚರ್ಚೆಗೆ ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ' ಎಂದರು.

‘ಸಂಗಮೇಶ್ ಅವರು ಯಾವುದೇ ತಪ್ಪು ಮಾಡಿಲ್ಲ. ಕ್ಷುಲ್ಲಕ ಕಾರಣಕ್ಕೆ ಸದಸ್ಯ ಸಂಗಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಕಲಂ 307ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಈ ಸಿಟ್ಟಿಗೆ ಅವರು ಆಕ್ರೋಶಿತರಾಗಿ ತಮ್ಮ ಅಂಗಿ ಕಳಚಿದ್ದಾರೆ. ಈ ಹಿಂದೆ ಗೂಳಿಹಟ್ಟಿ ಶೇಖರ್ ಬಟ್ಟೆ ಹರಿದುಕೊಂಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಪರಿಷತ್‍ನಲ್ಲಿ ಸಭಾಪತಿ ಅವರನ್ನು ದೂಡಲಾಗಿತ್ತು. ಆಗ ಏನು ಕ್ರಮ ಕೈಗೊಳ್ಳಲಾಗಿತ್ತು. ಹಲವು ಮಂದಿಯ ಬೆತ್ತಲೆ ಹಗರಣಗಳನ್ನು ನೋಡಿದ್ದೇವೆ. ಒಂದು ವಾರ ಕಾಲ ಅಮಾನತು ಸಲ್ಲ. ಕೂಡಲೇ ವಾಪಸ್ ಪಡೆಯಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಈ ಮಧ್ಯೆ ಮಾತನಾಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘ಸಂಗಮೇಶ್ ದೂರು ನನಗೆ ನೀಡಿದ್ದಾರೆ. ಆ ಬಗ್ಗೆ ಪರಿಶೀಲಿಸುತ್ತೇನೆ. ಆದರೆ, ಸದನದಲ್ಲಿ ಬಟ್ಟೆ ಕಳಚುವ ಮಟ್ಟಕ್ಕೆ ಹೋಗಿದ್ದು ಸರಿಯಲ್ಲ. ಅವರು ಉದ್ಧಟತನ ಪ್ರದರ್ಶಿಸಿದ್ದಾರೆ. ಸದನದ ಘನತೆ, ಗೌರವ ಹಾಳು ಮಾಡಿದ್ದಾರೆ. ಸಂಗಮೇಶ್ ಅವರ ಕೆಲಸವನ್ನು ಸಮರ್ಥನೆ ಮಾಡಿಕೊಳ್ಳುವ ಮಟ್ಟಿಗೆ ಕಾಂಗ್ರೆಸ್ ಕೆಳಮಟ್ಟಕ್ಕೆ ಹೋಗಿರುವುದು ಖಂಡನೀಯ. ಕಾಂಗ್ರೆಸ್‍ನವರು ಈ ದುರ್ನಡತೆ ಸಮರ್ಥನೆ ಸರಿಯಲ್ಲ' ಎಂದು ಆಕ್ಷೇಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಹಿರಿಯ ಸದಸ್ಯರಾದ ಅರಗ ಜ್ಞಾನೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಸಚೇತಕ ಸುನೀಲ್ ಕುಮಾರ್ ಸೇರಿದಂತೆ ಇನ್ನಿತರರು, 'ಇಲ್ಲೇನು ಕ್ಯಾಬರೆ ನೃತ್ಯ ನಡೆಯುತ್ತಿದೆಯೇ. ಸದನಕ್ಕೆ ಘನತೆ ಇಲ್ಲವೇ? ಯಾವುದೇ ಕಾರಣಕ್ಕೂ ಸಂಗಮೇಶ್ ಅವರ ಅಮಾನತು ಹಿಂಪಡೆಯಬಾರದು' ಎಂದು ಆಗ್ರಹಿಸಿದರು.

ಆಡಳಿತ ವಿಪಕ್ಷಗಳ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ, ಗದ್ದಲ-ಕೋಲಾಹಲದ ಹಿನ್ನೆಲೆಯಲ್ಲಿ ಸದನವನ್ನು ಅರ್ಧಗಂಟೆ ಕಾಲ ಮುಂದೂಡಲಾಯಿತು. ಬಳಿಕ 12:20ಕ್ಕೆ ಪುನಃ ಸದನ ಸಮಾವೇಶಗೊಂಡಿತು. ಕಾಂಗ್ರೆಸ್ ಸದಸ್ಯರ ಧರಣಿ ಗದ್ದಲದ ಮಧ್ಯೆ ‘ಒಂದು ರಾಷ್ಟ್ರ-ಒಂದು ಚುನಾವಣೆ' ವಿಷಯ ಕುರಿತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಅಭಿಪ್ರಾಯ ಮಂಡಿಸಿದರು.

‘ಒಂದು ರಾಷ್ಟ್ರ-ಒಂದು ಚುನಾವಣೆ' ವಿಷಯ ಆರೆಸ್ಸೆಸ್ ಅಜೆಂಡಾ, ಸ್ಪೀಕರ್ ಸರಕಾರ ಮತ್ತು ಆರೆಸ್ಸೆಸ್ ಕೈಗೊಂಬೆಯಾಗಿದ್ದಾರೆ. ಶಾಸಕ ಸಂಗಮೇಶ್ ಅಮಾನತು ಕೂಡಲೇ ಹಿಂಪಡೆಯಬೇಕೆಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಇದರಿಂದ ಗದ್ದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ ಅವರು ಸದನವನ್ನು ಮಧ್ಯಾಹ್ನದ ಭೋಜನ ವಿರಾಮಕ್ಕೆ ಮುಂದೂಡಿದರು.

ಮಧ್ಯಾಹ್ನ 3:45ರ ಸುಮಾರಿಗೆ ಕಲಾಪ ಸಮಾವೇಶಗೊಂಡಿತಾದರೂ ಕಾಂಗ್ರೆಸ್ ತಮ್ಮ ಪಟ್ಟು ಮುಂದುವರಿಸಿದರು. ಈ ಗದ್ದಲದ ಮಧ್ಯೆ ಆಡಳಿತ ಪಕ್ಷದ ಸದಸ್ಯ ಪಿ.ರಾಜೀವ್ ‘ಒಂದು ರಾಷ್ಟ್ರ  ಒಂದು ಚುನಾವಣೆ' ವಿಷಯದ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಸೋಮವಾರ(ಮಾ.8)ಕ್ಕೆ ಮುಂದೂಡಿದರು.

ಶಾಸಕ ಸಂಗಮೇಶ್ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು, ಅವರನ್ನು ಬೆಂಬಲಿಸಬಾರದು. ಸದನದ ಘನತೆಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾರೆ. ಈ ಸದನ ಪ್ರಜಾಪ್ರಭುತ್ವದ ದೇಗುಲವಿದ್ದಂತೆ. ಅದರ ಪಾವಿತ್ರ್ಯತೆಗೆ ಧಕ್ಕೆ, ಅಗೌರವ ತರುವುದನ್ನು ಸಮರ್ಥಿಸಿಕೊಳ್ಳುವುದು ಸಲ್ಲ. ಸಿದ್ದರಾಮಯ್ಯನವರೇ ಇದು ನಿಮ್ಮ ಹಿರಿತನಕ್ಕೆ ಸರಿ ಹೊಂದುವುದಿಲ್ಲ. ಧರಣಿ ಕೈಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಿ

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

ವಿಪಕ್ಷಗಳು ಆರೆಸ್ಸೆಸ್ ಹೆಸರನ್ನು ಎಷ್ಟು ಬಾರಿ ಹೇಳುತ್ತಾರೋ ಆರೆಸ್ಸೆಸ್ ಮತ್ತಷ್ಟು ಬಲಿಷ್ಠವಾಗಲಿದೆ. ಇಂದು ನಾನು ಈ ಸ್ಥಾನಕ್ಕೆ ಬರಲು ಆರೆಸ್ಸೆಸ್ ಕಾರಣ. ಪ್ರಧಾನಿ ಮೋದಿಯವರು ಆರೆಸ್ಸೆಸ್ ಹಿನ್ನೆಲೆಯಿಂದಲೇ ಬಂದಿದ್ದಾರೆ. ಸುಗಮ ಕಲಾಪಕ್ಕೆ ಸಹಕಾರ ನೀಡಿ. ಭಧ್ರಾವತಿಯಲ್ಲಿ ಏನು ನಡೆದಿದೆ ಚರ್ಚಿಸಬಹುದು. ಆದರೆ, ವಿಪಕ್ಷ ಕಾಂಗ್ರೆಸ್ ಸ್ಪೀಕರ್ ನಿರ್ಧಾರ ಪ್ರಶ್ನಿಸುವುದು ಸಲ್ಲ

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News