ಒಂದು ರಾಷ್ಟ್ರ ಒಂದು ಚುನಾವಣೆ: ಸದನದಲ್ಲಿ ಸಾಧ್ಯವಾಗದಿದ್ದರೆ ಸದನದ ಹೊರಗೆ ಚರ್ಚೆ- ಸ್ಪೀಕರ್ ಕಾಗೇರಿ

Update: 2021-03-05 12:27 GMT

ಬೆಂಗಳೂರು. ಮಾ. 5: ‘ಒಂದು ರಾಷ್ಟ್ರ ಒಂದು ಚುನಾವಣೆ' ವಿಷಯ ಆರೆಸ್ಸೆಸ್ ಅಜೆಂಡಾ ಅಲ್ಲ. ಪ್ರಧಾನಿ ಮೋದಿಯವರ ಅಜೆಂಡಾವೂ ಅಲ್ಲ. ಸದನದಲ್ಲಿ ಈ ವಿಷಯ ಚರ್ಚೆಗೆ ಪ್ರಯತ್ನ ನಡೆಸುವೆ. ಅದು ಸಾಧ್ಯವಾಗದಿದ್ದರೆ ಸದನದ ಹೊರಗೆ ಈ ವಿಚಾರ ಚರ್ಚಿಸುವ ಸಂಬಂಧ ತೀರ್ಮಾನ ಮಾಡಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಕಲಾಪ ಮುಂದೂಡಿಕೆ ಬಳಿಕ ಅನೌಪಚಾರಿಕವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಅವರು, ‘ಸಂಸತ್ತಿನ ಸ್ಥಾಯಿ ಸಮಿತಿ ಬಹಳ ಹಿಂದೆಯೇ ಚುನಾವಣೆ ವಿಷಯ ಪ್ರಸ್ತಾಪಿಸಿತ್ತು. ಅಲ್ಲದೆ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ‘ಒಂದು ರಾಷ್ಟ್ರ ಒಂದು ಚುನಾವಣೆ' ಬಗ್ಗೆ ಮಾತನಾಡಿದ್ದರು. ನವೆಂಬರ್ ನಲ್ಲಿ ಗುಜರಾತ್‍ನಲ್ಲಿ ನಡೆದ ಎಲ್ಲ ರಾಜ್ಯಗಳ ಸ್ಪೀಕರ್ ಗಳ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಒಂದು ಚುನಾವಣೆ ಬಗ್ಗೆ ಎಲ್ಲ ರಾಜ್ಯಗಳ ವಿಧಾನಸಭೆಯಲ್ಲೂ ಚರ್ಚೆಯಾಗಲಿ ಎಂದು ಹೇಳಿದ್ದರು. ಅದರಂತೆ ನಾನು ಗುಜರಾತ್‍ನಲ್ಲಿದ್ದಾಗಲೇ ಈ ಬಗ್ಗೆ ಸಿಎಂ ವಿಪಕ್ಷರು ಸೇರಿದಂತೆ ಎಲ್ಲರ ಜತೆಯೂ ಸಮಾಲೋಚಿಸಿದ್ದೇನೆ ಎಂದು ಹೇಳಿದರು.

ಆದರೆ, ಕಾರಣಾಂತರಗಳಿಂದ ಆಗ ಚರ್ಚೆ ನಡೆಸಲು ಸಾಧ್ಯವಾಗಿರಲಿಲ್ಲ. ಎಲ್ಲರೂ ಒಪ್ಪಿಗೆ ನೀಡಿ ಇದೀಗ ಪಕ್ಷದ ತೀರ್ಮಾನದ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇತರೆ ಪಕ್ಷದ ಸದಸ್ಯರಿಗೂ ಮಾತನಾಡಲು ಅವಕಾಶ ನೀಡದಿರುವುದು, ಕಲಾಪ ಸಮಯ ವ್ಯರ್ಥ ಸರಿಯಲ್ಲ. ಹೀಗಾಗಿ ಮತ್ತೊಮ್ಮೆ ವಿಪಕ್ಷಗಳ ಮನವೊಲಿಕೆ ಪ್ರಯತ್ನ ಮಾಡುತ್ತೇನೆ ಎಂದರು.

ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾದರೆ ಒಳ್ಳೆಯದು ಎಂಬ ಕಾರಣಕ್ಕೆ ಸದನದ ಹೊರಗೆ ಈ ವಿಚಾರದ ಚರ್ಚೆ ಬೇಡ ಎಂಬುದು ತಮ್ಮ ನಿಲುವು. ವಿಧಾನಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ' ಚರ್ಚೆ ಸಾಧ್ಯವಾಗದಿದ್ದರೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಚರ್ಚಿಸುವ ಸಂಬಂಧ ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News