'ದಲಿತ ಕ್ರೈಸ್ತರಿಗೆ ಮೀಸಲಾತಿ ಬೇಡ' ಹೇಳಿಕೆಯನ್ನು ಸಮರ್ಥಿಸಿಕೊಂಡ ಸಂಸದ ಪ್ರತಾಪ್ ಸಿಂಹ

Update: 2021-03-05 12:48 GMT

ಮೈಸೂರು,ಮಾ.5: ಕ್ರೈಸ್ತ ಧರ್ಮಕ್ಕೆ ಮತಾಂತರ ಆದ ದಲಿತರಿಗೆ ಯಾವುದೇ ಮೀಸಲಾತಿ ಬೇಡ ಎಂಬ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಳ್ಳುವ ಮೂಲಕ 'ವಾರ್ತಾಭಾರತಿ' ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪ್ರಸಂಗ ನಡೆಯಿತು.

ನಗರದ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಯಲ್ಲಿ ಶುಕ್ರವಾರ ಶ್ರವಣದೋಷವುಳ್ಳವರಿಗೆ ಉಚಿತ ಶ್ರವಣ ಯಂತ್ರಗಳನ್ನು ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಾತಿ ವ್ಯವಸ್ಥೆ ಇರುವುದು ಹಿಂದೂ ಧರ್ಮದಲ್ಲಿ. ಆದರೆ ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರ ಆದರೆ ಮೀಸಲಾತಿ ಕೊಡಲು ಸಾಧ್ಯವಿಲ್ಲ. ಈ ವಿಚಾರವನ್ನು ಲೋಕಸಭೆಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಪ್ರಸ್ತಾವ ಮಾಡಿದ್ದಾರೆ ಎಂದು ಹೇಳಿದರು.

ಬುಡಕಟ್ಟು ಸಮುದಾಯ ನಾಗರಿಕ ಸಮಾಜದಿಂದ ದೂರ ಉಳಿದು, ನಾಗರೀಕ ಸಮಾಜ ಕಂಡರೆ ಅಂಜಿಕೆ ಪ್ರತೀತಿ ಇದೆ. ಅವರಲ್ಲಿ ಅವರದೇ ಆದ ಸಂಸ್ಕೃತಿ ಆಚಾರ ವಿಚಾರವೊಳಗೊಂಡಿದೆ. ಹಾಗಾಗಿಯೇ ಅವರನ್ನು ಬುಡಕಟ್ಟು ಜನಾಂಗ ಎನ್ನುವುದು. ಅವರು ಕಾಡಿನಲ್ಲಿ ಮಾರಮ್ಮ, ಅಣ್ಣಮ್ಮ ಮತ್ತು ಕಾಳಮ್ಮನನ್ನು ಪೂಜೆ ಮಾಡಿಕೊಂಡು ಇರುತ್ತಾರೆ. ಅಂತವರು ಏಸು ಸ್ವಾಮಿಯನ್ನು ದೇವರು ಎಂದು ಒಪ್ಪಿಕೊಳ್ಳುವ ವಿವೇಚನೆ ಬಂದಾಗ ಅವರಿಗೆ ಮೀಸಲಾತಿ ನೀಡಬೇಕೆ ಎಂದು ಪ್ರಶ್ನಿಸಿದರು.

ಇಂತಹ ಸಮಾಜವನ್ನು ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿರುವುದನ್ನು ತಡೆಯಬೇಕು. ಅವರ ವಿಶಿಷ್ಟತೆಯನ್ನು ಉಳಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಕ್ರೈಸ್ತ ಧರ್ಮಕ್ಕೆ ಮತಾತಂತರಗೊಂಡವರಿಗೆ ಮೀಸಲಾತಿ ಬೇಡ ಎಂದು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.

ಈಗಾಗಲೇ ಲೋಕಸಭೆಯಲ್ಲಿ ರವಿಶಂಕರ್ ಪ್ರಸಾದ್ ಅವರು 'ಜಾತಿ ವ್ಯವಸ್ಥೆ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ಅದಕ್ಕಾಗಿಯೇ ದಲಿರಿಗೆ ಮೀಸಲಾತಿ ನೀಡಿರುವುದು. ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ದಲಿತ ಕ್ರಶ್ಚಿಯನ್ ಎಂದು ಹೇಳುತ್ತಾರೆ. ಅವರಿಗೆ ಮೀಸಲಾತಿ ನೀಡಲು ಆಗುವುದಿಲ್ಲ' ಎಂದಿದ್ದಾರೆ. ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ. ಹಾಗಿದ್ದ ಮೇಲೆ ದಲಿತ ಕ್ರಿಶ್ಚಿಯನ್ ಎಂದು ಮೀದಲಾತಿ ನೀಡಿ ಎಂದರೆ ಇದಕ್ಕೆ ತರ್ಕ ಇದೆಯೇ ? ಇದರ ಹಿಂದೆ ವಿವೇಚನೆ ಇದೆಯೇ ಎಂದು ಪ್ರಶ್ನಿಸಿದರು.

ಹಾಗಿದ್ದ ಮೇಲೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೂ ಮೀಸಲಾತಿ ನೀಡುವುದು ಬೇಡವೇ ಎಂಬ ಪ್ರಶ್ನೆಗೆ, ಇದು ಬಿಟ್ಟು ಬೇರೆ ಪ್ರಶ್ನೆ ಕೇಳಿ ಎಂದು ಪ್ರತಾಪ್ ಸಿಂಹ ನುಣುಚಿಕೊಂಡರು. ಈ ವೇಳೆ 'ನಿಮ್ಮ ಈ ಹೇಳಿಕೆ ವಿರುದ್ಧ ಪ್ರತಿಭಟನೆಗಳಾಗಿವೆ ಹಾಗಾಗಿಯೇ ಕೇಳುತ್ತಿರುವುದು ಎಂದು ಮತ್ತೆ ಪ್ರಶ್ನಿಸಿದಾಗ, ನನ್ನ ವಿರುದ್ಧ 'ವಾರ್ತಾಭಾರತಿ' ಯವರೆ ಕ್ಯಾಂಪೇನ್ ಮಾಡಲಿ. ನಾನೇ ಮುಂದೆಯೂ ಎಂಪಿ ಆಗುವುದು ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News