ಸಿಡಿ ಬಿಡುಗಡೆ ಪ್ರಕರಣ: ದಿನೇಶ್ ಕಲ್ಲಹಳ್ಳಿಯನ್ನು ಸತತ ನಾಲ್ಕು ಗಂಟೆ ವಿಚಾರಣೆ ನಡೆಸಿದ ಪೊಲೀಸರು

Update: 2021-03-05 13:50 GMT

ಬೆಂಗಳೂರು, ಮಾ.5: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೊ ಬಿಡುಗಡೆ ಪ್ರಕರಣ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ, ಲಿಖಿತ ರೂಪದಲ್ಲಿ ತಮ್ಮ ಹೇಳಿಕೆ ದಾಖಲಿಸಿದರು.

ದೂರಿಗೆ ಸಂಬಂಧಿಸಿದಂತೆ ಪೊಲೀಸರು ಜಾರಿಗೊಳಿಸಿದ್ದ ನೋಟಿಸ್ ಹಿನ್ನೆಲೆ ಶುಕ್ರವಾರ ಮಧ್ಯಾಹ್ನ ಸುಮಾರಿಗೆ ಇಲ್ಲಿನ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಗಳ ಮುಂದೆ ಹಾಜರಾಗಿ ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ತದನಂತರ, ಹೊರಬಂದ ದಿನೇಶ್ ಕಲ್ಲಹಳ್ಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮಾಜಿ ಸಚಿವರ ಅಶ್ಲೀಲ ಸಿಡಿ ಬಿಡುಗಡೆ ಸಂಬಂಧ ನೀಡಿರುವ ದೂರಿಗೆ ಈಗಲೂ ಬದ್ಧವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿಯಿರುವ ಎಲ್ಲ ದಾಖಲೆ, ಮಾಹಿತಿಯನ್ನು ತನಿಖಾಧಿಕಾರಿಗಳೊಂದಿಗೆ ಹಂಚಿಕೊಂಡಿದ್ದೇನೆ. ಆದರೆ, ತನಿಖಾದೃಷ್ಟಿಯಿಂದ ಯಾವ ರೀತಿಯ ಮಾಹಿತಿ ನೀಡಿದ್ದೇನೆ ಎಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈಗಾಗಲೇ ಹಲವು ಮಾಹಿತಿ ಹಂಚಿಕೊಂಡಿದ್ದು, ನನ್ನ ದೂರಿನನ್ವಯ ಮೊಕದ್ದಮೆ ದಾಖಲು ಮಾಡುವ ವಿಶ್ವಾಸವಿದೆ. ಆದರೆ, ಯಾವುದೇ ಕಾರಣಕ್ಕೂ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದಿಲ್ಲ ಎಂದು ಅವರು ತಿಳಿಸಿದರು.

ಸಂತ್ರಸ್ತೆಯೊಂದಿಗೆ ನಾನು ಸಂಪರ್ಕ ಹೊಂದಿಲ್ಲ. ಆಕೆಯನ್ನು ನಾನು ಇದುವರೆಗೂ ನೋಡಿಲ್ಲ. ಆದರೆ, ನೊಂದ ಕುಟುಂಬದ ಸದಸ್ಯರೊಬ್ಬರನ್ನು ನನ್ನನ್ನು ಭೇಟಿ ಮಾಡಿ ಈ ಮಾಹಿತಿ ಹಂಚಿಕೊಂಡರು. ಅವರನ್ನು ಎಲ್ಲಿ ಮತ್ತು ಹೇಗೆ ಭೇಟಿ ಮಾಡಿದ್ದೇನೆ ಎಂದೂ ಹೇಳಲು ಸಾಧ್ಯವಿಲ್ಲ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದರು.

ಕುಮಾರಸ್ವಾಮಿ ಹೇಳಿಕೆಗೆ ಸಹಮತ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ ಬ್ಲಾಕ್‍ಮೇಲ್ ತಂತ್ರ ಇದ್ದು, ತನಿಖೆ ನಡೆಸಬೇಕೆಂದು ಹೇಳಿದ್ದಾರೆ. ಇದಕ್ಕೆ ನನ್ನ ಸಹಮತವೂ ಇದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಯಲಿ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದರು.

‘ಮಾಹಿತಿ ಹಂಚಿಕೆ ಸಾಧ್ಯವಿಲ್ಲ’

ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ವಿವರ ನೀಡಲು ಸಾಧ್ಯವಿಲ್ಲ.

-ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ

ಮತ್ತಿಬ್ಬರಿಗೆ ನೋಟಿಸ್?

ದಿನೇಶ್ ಕಲ್ಲಹಳ್ಳಿ ನೀಡಿರುವ ಪ್ರಾಥಮಿಕ ಮಾಹಿತಿ ಅನ್ವಯ ಸಂತ್ರಸ್ತೆಯ ಕುಟುಂಬ ಸದಸ್ಯ ಸೇರಿ ಇಬ್ಬರಿಗೆ ಇಲ್ಲಿನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹ’

ಇದೇ ಮೊದಲ ಬಾರಿಗೆ ಸಂತ್ರಸ್ತೆ ಅಲ್ಲದೆ, ಆಕೆಯ ಕುಟುಂಬಸ್ಥರೂ ಅಲ್ಲದೆ, ಮೂರನೆ ವ್ಯಕ್ತಿ ಲೈಂಗಿಕ ದೌರ್ಜನ್ಯ ಕುರಿತು ದೂರು ಸಲ್ಲಿಕೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸುವ ಕುರಿತು ಪೊಲೀಸರು ಕಾನೂನು ತಜ್ಞರ ಅಭಿಪ್ರಾಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ವಯಂಪ್ರೇರಿತ ಮೊಕದ್ದಮೆ ದಾಖಲು ?

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಆಯೋಗವೂ, ಕರ್ನಾಟಕ ರಕ್ಷಣಾ ವೇದಿಕೆ ಸಲ್ಲಿಸಿದ್ದ ದೂರಿನನ್ವಯ ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದು, ಸಂತ್ರಸ್ತೆಯ ವಿಳಾಸಕ್ಕೆ ನೋಟಿಸ್ ಕಳುಹಿಸಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News