'ಮಹಾಪಂಚಾಯತ್' ಲೋಗೋ ಬಿಡುಗಡೆ: ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಭಾಗಿ ಸಾಧ್ಯತೆ

Update: 2021-03-05 13:47 GMT

ಶಿವಮೊಗ್ಗ,ಮಾ.5: ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಐತಿಹಾಸಿಕ ರೈತರ ಮಹಾ ಪಂಚಾಯತ್ ಗೆ ಶಿವಮೊಗ್ಗ ಸಾಕ್ಷಿಯಾಗುತ್ತಿದೆ. ಇದರ ಅಂಗವಾಗಿ ಮಾರ್ಚ್ 20 ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆಯುವ ರೈತರ ಮಹಾಪಂಚಾಯತ್ ಕಾರ್ಯಕ್ರಮದ ಲೋಗೋವನ್ನು ರೈತ ಮುಖಂಡ ಕಡಿದಾಳ್ ಶಾಮಣ್ಣ ಬಿಡುಗಡೆ ಮಾಡಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ರೈತ ಮುಖಂಡ ಕಡಿದಾಳ್ ಶಾಮಣ್ಣ, ರೈತ ಸಂಘಟನೆಗಳು ಒಗ್ಗೂಡಿ ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ನಡೆಸುತ್ತಿರುವ ಹೋರಾಟಕ್ಕೆ ಜಯವಾಗಲಿ. ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.

ನಂತರ ಮಾತನಾಡಿದ ರೈತ ಮುಖಂಡ ಕೆ.ಟಿ ಗಂಗಾಧರ್, ಬಿಜೆಪಿ ಸರ್ಕಾರಗಳು ಭಾರತದ ಆಹಾರ ಸಾರ್ವಭೌಮತೆಯನ್ನು ಬಂಡವಾಳಶಾಹಿಗಳ ಕೈಗೆ ಕೊಡಲು ಹೊರಟಿದ್ದಾರೆ ಎಂದು ದೂರಿದರು.

ರಾಜ್ಯ ಹಲವಾರು ಮುಖ್ಯಮಂತ್ರಿಗಳು ಕಂಡಿದೆ. ಆದರೆ ರೈತರ ಸಮಸ್ಯೆಗಳು ಮಾತ್ರ ಇಂದಿಗೂ ಜೀವಂತವಾಗಿದೆ. ರೈತರನ್ನು ಮತ ಬ್ಯಾಂಕ್ ಗಳಾಗಿ ಮಾಡಿಕೊಂಡಿವೆ ಎಂದ ಅವರು, ವಿವಾದಿತ ಕೃಷಿ ಕಾಯ್ದೆಗಳನ್ನು ಸಂಘಪರಿವಾರ ಕೂಡ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಮೋದಿಯವರಿಗೆ ಅಧಿಕಾರದ ದಾಹ ಹೆಚ್ಚಾಗಿದೆ ಎಂದು ಎಚ್ಚರಿಸಿದೆ ಎಂದರು.

ನೂತನ ಕೃಷಿಕಾಯ್ದೆಗಳು ರೈತ ವಿರೋಧಿಯಾಗಿವೆ. ಇವುಗಳನ್ನು ಹಿಂಪಡೆಯಬೇಕು ಎಂದು ಪ್ರಧಾನಿಯವರಿಗೆ ಸಲಹೆ ನೀಡಿದರೂ ಒಪ್ಪುತ್ತಿಲ್ಲ. ರೈತರ ವಿರುದ್ಧ ಮೋದಿ ಒಳಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ರೈತರಿಗೆ ಗಂಡಾಂತರ ಬಂದೊದಗಿದೆ. ಆಹಾರ ಸಾರ್ವಭೌಮತೆ ಕಾಪಾಡಲು ಚಳವಳಿಗ ತವರೂರಾದ ಶಿವಮೊಗ್ಗ ವೇದಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ಹಾಗೂ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಮಾತನಾಡಿ, ದೇಶದಲ್ಲಿ ಮತ್ತೊಂದು ರೈತ ಕ್ರಾಂತಿ ಹುಟ್ಟುಹಾಕಲು ಮೋದಿ ಕಾರಣರಾಗಿದ್ದಾರೆ. ಅವರ ಪ್ರಯತ್ನದ ಫಲವಾಗಿ ರೈತ ಮುಖಂಡರೆಲ್ಲ ಒಗ್ಗಟಾಗಿದ್ದೇವೆ. ಅದಕ್ಕಾಗಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ವಿವಾದಿತ ಕೃಷಿಕಾಯ್ದೆಗಳಿಂದ ಸಾಮಾನ್ಯ ಜನರು ಅನ್ನ ಇಲ್ಲದೇ ಸಾಯುವ ಪರಿಸ್ಥಿತಿ ಬರಲಿದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಕೃಷಿ ಕಾಯ್ದೆ ಜಾರಿಗೆ ತಂದಿದೆ ಎಂದರು.

ಮಾರ್ಚ್ 20 ರಂದು ನಗರದ ಸೈನ್ಸ್ ಮೈದಾನದಲ್ಲಿ ಸಂಜೆ 4 ಗಂಟೆಗೆ ರೈತರ ಮಹಾ ಪಂಚಾಯತ್ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ರೈತ ಸಂಘದ ರಾಷ್ಟ್ರೀಯ ಮುಖಂಡರುಗಳಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್, ಡಾ.ದರ್ಶನ್ ಪಾಲ್, ಜಗಮೋಹನ್ ಸಿಂಗ್ ಭಾಗವಹಿಸಲಿದ್ದಾರೆ. ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ರೈತರ ಮಹಾ ಪಂಚಾಯತ್ ನಲ್ಲಿ ಉಡುಪಿ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಐದು ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ. ಪಂಚಾಯತ್ ನಲ್ಲಿ 1 ಲಕ್ಷ ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸರ್ಕಾರಗಳಿಗೆ ಬುದ್ದಿ ಕಲಿಸಬೇಕು ಎಂದರೆ ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದರು.

ಜನಶಕ್ತಿ ಸಂಘಟನೆಯ ಕೆ.ಎಲ್.ಆಶೋಕ್ ಮಾತನಾಡಿ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಹೋರಾಟ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದೆ. ಇದಕ್ಕೆ ಸಮಾಜವಾದಿ ಚಿಂತನೆ ಹಾಗೂ ಚಳವಳಿಗಳ ತವರೂರಾದ ಶಿವಮೊಗ್ಗ ಸಾಕ್ಷಿಯಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸ್ವರಾಜ್ ಇಂಡಿಯಾ ವಕ್ತಾರ ಕೆ.ಪಿ ಶ್ರೀಪಾಲ್, ಅನನ್ಯ ಶಿವು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಮುಖಂಡರಾದ ಎನ್.ರಮೇಶ್, ಹೆಚ್.ಸಿ ಯೋಗೇಶ್, ವಿಶ್ವನಾಥ್ ಕಾಶಿ, ಬಿ.ಎ ರಮೇಶ್ ಹೆಗಡೆ, ಡಿಎಸ್ ಎಸ್ ಮುಖಂಡ ಹಾಲೇಶಪ್ಪ, ಜೆಡಿಎಸ್ ಮುಖಂಡ ಹೆಚ್.ಪಾಲಾಕ್ಷಿ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News