ಕ್ಷೀರಭಾಗ್ಯ ಹಾಲಿನ ಪುಡಿ ಅಕ್ರಮ ಮಾರಾಟ ಪ್ರಕರಣ: ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಿಗೆ ಜಾಮೀನು

Update: 2021-03-05 14:07 GMT

ಬೆಂಗಳೂರು, ಮಾ.5: ಕ್ಷೀರಭಾಗ್ಯ ಯೋಜನೆ ಅಡಿ ಅಂಗನವಾಡಿ ಮಕ್ಕಳಿಗೆ ನೀಡಬೇಕಾಗಿದ್ದ ಹಾಲಿನ ಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಇಬ್ಬರು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ(ಸಿಡಿಪಿಒ)ಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿಗಳಾದ ವಿಜಯಪುರ ಪಟ್ಟಣ ಸಿಡಿಪಿಒ ನಿರ್ಮಲಾ ಹಾಗೂ ವಿಜಯಪುರ ಗ್ರಾಮಾಂತ ಸಿಡಿಪಿಒ ಗೀತಾ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಬಡ ಮಕ್ಕಳಿಗೆ ನೀಡಬೇಕಿದ್ದ ಹಾಲಿನ ಪುಡಿಯನ್ನು ಮಾರಾಟ ಮಾಡಲು ಮುಂದಾಗಿದ್ದರು ಎಂಬ ವಿಚಾರ ಅತ್ಯಂತ ಗಂಭೀರವಾದದ್ದು. ಹಾಗಿದ್ದೂ ಪ್ರಕರಣದ ಎಲ್ಲ ಆರೋಪಿಗಳಿಗೂ ನಿರೀಕ್ಷಣಾ ಅಥವಾ ಸಾಮಾನ್ಯ ಜಾಮೀನು ಸಿಕ್ಕಿರುವುದರಿಂದ ಈ ಇಬ್ಬರು ಅಧಿಕಾರಿಗಳಿಗೂ ಜಾಮೀನು ನೀಡಬಹುದಾಗಿದೆ. ಇನ್ನು ಆರೋಪಿಗಳಿಬ್ಬರೂ 2021ರ ಫೆ. 19ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿಯೇ ಇಟ್ಟುಕೊಂಡರೆ ಆರೋಪ ಸಾಬೀತಾಗುವ ಮುನ್ನವೇ ವಿಚಾರಣಾ ಪೂರ್ವ ಶಿಕ್ಷೆ ವಿಧಿಸಿದಂತಾಗುತ್ತದೆ. ಹೀಗಾಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಆರೋಪಿತ ಸಿಡಿಪಿಒಗಳು ತಲಾ ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಒದಗಿಸಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡಬೇಕು. ಇಂಥ ಕೃತ್ಯಗಳಲ್ಲಿ ಪುನಃ ಭಾಗಿಯಾಗಬಾರದು. ಸಾಕ್ಷ್ಯಗಳನ್ನು ಬೆದರಿಸಬಾರದು ಹಾಗೂ ನಾಶಪಡಿಸಬಾರದು. ಆರೋಪಿಗಳಿಬ್ಬರೂ ಪ್ರತಿ ತಿಂಗಳ 1 ಹಾಗೂ 15ರಂದು ಪೊಲೀಸ್ ಠಾಣೆಗೆ ತೆರಳಿ ರುಜು ಹಾಕಬೇಕು. ವಿಚಾರಣಾಧಿಕಾರಿಗಳು ಹಾಗೂ ನ್ಯಾಯಾಲಯ ಕರೆದಾಗ ತಪ್ಪದೇ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತುಗಳನ್ನು ವಿಧಿಸಿದೆ.

ಪ್ರಕರಣವೇನು: ಕ್ಷೀರಭಾಗ್ಯ ಯೋಜನೆ ಅಡಿ ಮಕ್ಕಳಿಗೆ ವಿತರಿಸಬೇಕಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಹಾಲಿನ ಪುಡಿಯನ್ನು ಜಮಖಂಡಿ ಪಟ್ಟಣದ ದೇವರಾಜ ಅರಸ್ ಹೋಟೆಲ್ ಹಿಂಭಾಗದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದು, ಅದನ್ನು ಗಿರೀಶ್ ಮಲ್ಲಪ್ಪ ತೇಲಿ ಹಾಗೂ ಇತರರು ಐಸ್‍ಕ್ರೀಮ್ ಹಾಗೂ ಸಿಹಿ ತಿನಿಸು ತಯಾರಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಜಮಖಂಡಿ ಸಿಡಿಪಿಒ ಅನುರಾಧಾ ಜಮಖಂಡಿ ಠಾಣೆ ಪೊಲೀಸರಿಗೆ 2020ರ ಫೆ.20ರಂದು ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News