ನಿಯಮ ಮೀರಿ ಕಾರ್ಯಾಚರಣೆ ಮಾಡುವ ಕ್ಯಾಬ್‍ಗಳ ವಿರುದ್ಧ ಕ್ರಮ: ಲಕ್ಷ್ಮಣ್ ಸವದಿ

Update: 2021-03-05 14:16 GMT

ಬೆಂಗಳೂರು, ಮಾ.5: ನಿಗದಿಪಡಿಸಿದ ಪ್ರಯಾಣಿಕರಿಗಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಸಂಚಾರ ಮಾಡುವ ಮ್ಯಾಕ್ಸಿಕ್ಯಾಬ್ ಹಾಗೂ ಇತರೆ ವಾಹನಗಳ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.   

ಶುಕ್ರವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಆರ್.ಪ್ರಸನ್ನಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು, 12x1 ಆಸನ ಸಾಮರ್ಥ್ಯ ಹೊಂದಿದ ಮ್ಯಾಕ್ಸಿಕ್ಯಾಬ್ ವಾಹನಗಳು ಹೆಚ್ಚಿನ ಆಸನಗಳನ್ನು ಅಳವಡಿಸಿಕೊಳ್ಳಲು ಇಚ್ಛಿಸಿದರೆ ಅಂತಹ ವಾಹನಗಳಿಗೆ ಹೊಸ ನೋಂದಣಿ ಪ್ರಮಾಣ ಪತ್ರವನ್ನು ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ಮ್ಯಾಕ್ಸಿಕ್ಯಾಬ್‍ಗಳು 16x1ರಿಂದ 20x1 ಆಸನಗಳವರೆಗೆ ಮಾರ್ಪಡಿಸಿಕೊಳ್ಳಲು ಇಚ್ಛಿಸಿದರೆ ಅಂತಹ ವಾಹನಗಳಿಗೆ ತೆರಿಗೆ ನಿಯಮಗಳ ಅನುಸಾರವಾಗಿ ತೆರಿಗೆಯನ್ನು ವಿಧಿಸಲು ರಾಜ್ಯದ ಎಲ್ಲ ನೋಂದಣಿ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮ್ಯಾಕ್ಸಿಕ್ಯಾಬ್‍ಗಳು ಹಾಗೂ ಇತರೆ ವಾಹನಗಳು ಹೆಚ್ಚಿನ ಪ್ರಯಾಣಿಕರನ್ನು ಕೂರಿಸಿಕೊಂಡು ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅವರು ಮೋಟಾರ್ ಕಾಯ್ದೆ ವಾಹನಗಳಡಿ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಮ್ಯಾಕ್ಸಿಕ್ಯಾಬ್ ಸೇರಿದಂತೆ ಇತರೆ ವಾಹನಗಳ ತಪಾಸಣೆ ನಡೆಸಿ, ಕಾನೂನು ಬಾಹಿರವಾಗಿ ಸಂಚರಿಸುತ್ತಿದ್ದ 34,168 ಮ್ಯಾಕ್ಸಿಕ್ಯಾಬ್‍ಗಳು, 6,11,871 ಇತರೆ ವಾಹನಗಳ ವಿರುದ್ಧ ದೂರು ದಾಖಲಿಸಿಕೊಂಡು 27 ಕೋಟಿ ರೂ.ಗಳ ದಂಡವನ್ನು ಸಾರಿಗೆ ಇಲಾಖೆ ಸಂಗ್ರಹಿಸಿದೆ ಎಂದು ಹೇಳಿದರು.

2020ರಲ್ಲಿ ಮ್ಯಾಕ್ಸಿಕ್ಯಾಬ್‍ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ಸಂಗ್ರಹಿಸಲಾಗಿದೆ. ಇತರೆ ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ದಂಡ ಸಂಗ್ರಹಿಸಲಾಗಿದೆ. ಒಟ್ಟಾರೆ 18,37,31,690 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News