ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈ ಬಿಡುವ ಮೊದಲು ಕೇಂದ್ರದ ಅನುಮತಿ ಕಡ್ಡಾಯ: ಹೈಕೋರ್ಟ್

Update: 2021-03-05 14:24 GMT

ಬೆಂಗಳೂರು, ಮಾ.5: ರಾಜ್ಯದ ಮೀಸಲು ಅರಣ್ಯ ಪ್ರದೇಶ ಅಥವಾ ಅರಣ್ಯದ ಕೆಲ ಭೂ ಭಾಗವನ್ನು ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈಬಿಡುವ ಮೊದಲು ಕೇಂದ್ರ ಸರಕಾರದ ಅನುಮತಿ ಕಡ್ಡಾಯ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ. ಇದರಿಂದ, ರಾಜ್ಯ ಸರಕಾರಕ್ಕೆ ತೀವ್ರ ಹಿನ್ನೆಡೆವುಂಟಾಗಿದೆ.

2017ರಲ್ಲಿ ರಾಜ್ಯ ಸರಕಾರ ಶಿವಮೊಗ್ಗದ ಸಾಗರ ಅರಣ್ಯ ಪ್ರದೇಶದ 6742 ಎಕರೆಯಲ್ಲಿ 30.16 ಎಕರೆ ಭೂಮಿಯನ್ನು ಪುನರ್ವಸತಿ ಯೋಜನೆಗಾಗಿ ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈಬಿಟ್ಟು ಕಂದಾಯ ಇಲಾಖೆಗೆ ಹಸ್ತಾಂತರಿಸಿತ್ತು. ಇದನ್ನು ಪ್ರಶ್ನಿಸಿ ಗಿರೀಶ್ ಆಚಾರ್ ಎನ್ನುವವರು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ರಾಜ್ಯ ಸರಕಾರ ತನ್ನ ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್ 28ರ ಅಡಿ ಈ ಕ್ರಮ ಜರುಗಿಸಿರುವುದಾಗಿ ಹೇಳಿದೆ. ಆದರೆ, ಮೀಸಲು ಅರಣ್ಯ ಪ್ರದೇಶವನ್ನು ಕೈಬಿಟ್ಟಿರುವ ರಾಜ್ಯದ ಕ್ರಮ ಕೇಂದ್ರ ಸರಕಾರ ಜಾರಿಗೆ ತಂದಿರುವ ಅರಣ್ಯ(ಸಂರಕ್ಷಣೆ) ಕಾಯ್ದೆ -1980ರ ಸೆಕ್ಷನ್ 2 ರ ವಿವರಣೆ ಹಾಗೂ ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ.

ಮೀಸಲು ಅರಣ್ಯ ಭೂಮಿಯನ್ನು ಕೈಬಿಟ್ಟಿರುವ ಸರಕಾರದ ಕ್ರಮ ಕಾನೂನು ಬಾಹಿರವಷ್ಟೇ ಅಲ್ಲ, ಸಂವಿಧಾನದ ವಿಧಿ 48ಎ ಹಾಗೂ 51ಎ ಗಳನ್ನು ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟಿದೆ. ಹಾಗೆಯೇ, ಮೀಸಲು ಅರಣ್ಯ ವ್ಯಾಪ್ತಿಯಿಂದ 30.16ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿದ್ದ ಸರಕಾರದ ಕ್ರಮವೂ ಅನೂರ್ಜಿತ ಎಂದು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News