ಒಪ್ಪಿಗೆಯ ಮೇಲೆ ನಡೆದಿದ್ದರೆ ಅದು ಅತ್ಯಾಚಾರ ಆಗಲ್ಲ: ಸಿಡಿ ಪ್ರಕರಣದ ಬಗ್ಗೆ ಶಾಸಕ ರೇಣುಕಾಚಾರ್ಯ

Update: 2021-03-05 14:43 GMT

ಬೆಂಗಳೂರು, ಮಾ. 5: ಇಬ್ಬರ ಒಪ್ಪಿಗೆಯ ಮೇಲೆ ನಡೆದಿದ್ದರೆ ಅದು ಅತ್ಯಾಚಾರ ಆಗುವುದಿಲ್ಲ. ರಮೇಶ್ ಜಾರಕಿಹೊಳಿ ಅವರನ್ನು ಬಲಿಪಶು ಮಾಡಲಾಗಿದೆ. ಹೀಗಾಗಿ ದೂರು ನೀಡಿದ ದಿನೇಶ್ ಕಲ್ಲಹಳ್ಳಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವ್ಯವಸ್ಥಿತ ಷಡ್ಯಂತ್ರದಿಂದ ಈ ರೀತಿ ಮಾಡಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು. ಆ ಮಹಿಳೆಗೂ ದಿನೇಶ್ ಕಲ್ಲಹಳ್ಳಿಗೂ ಏನು ಸಂಬಂಧ? ಆಕೆ ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದಾಳೆ. ಅಲ್ಲದೆ, ದಿನೇಶ್ ಕಲ್ಲಹಳ್ಳಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ದೂರಿದರು.

ಅಣ್ಣನ ಮುಗಿಸಲು ಷಡ್ಯಂತ್ರ: ರಮೇಶ್ ಅವರ ಕುರಿತಾದ ಸಿಡಿ ಫೇಕ್, ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಲಾಗಿದೆ. ರಾಜಕೀಯವಾಗಿ ಬೆಳೆಯುತ್ತಿರುವ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಹೋದರ ಲಖನ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಇದರಲ್ಲಿ ವಿರೋಧಿಗಳು ಯಶಸ್ವಿ ಆಗುವುದಿಲ್ಲ. ರಮೇಶಣ್ಣ ಇದರಿಂದ ಗೆದ್ದು ಬರಲಿದ್ದಾರೆ. ಗೋಕಾಕ್ ಕ್ಷೇತ್ರದಾದ್ಯಂತ ಅವರನ್ನು ಜನತೆ ರಮೇಶಣ್ಣ ಎಂದು ಕರೆಯುತ್ತಾರೆ. ರಮೇಶ ಹೀಗೆ ಮಾಡ್ತಾರೆಂದು ಯಾರಿಗೂ ಅನ್ನಿಸುತ್ತಿಲ್ಲ. ಅಣ್ಣನನ್ನು ಕ್ಷೇತ್ರದ ಜನ ಬಿಟ್ಟುಕೊಡಲು ಸಿದ್ಧರಿಲ್ಲ. ನಾನು ನೈತಿಕವಾಗಿ ಅವರ ಬೆಂಬಲಕ್ಕೆ ಇದ್ದೇನೆ ಎಂದರು.

‘ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ರಾಜಕೀಯದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕೇ ಹೊರತು ಖಾಸಗಿ ಬದುಕನ್ನು ಈ ರೀತಿ ಮಾಡಬಾರದು. ಪಕ್ಷಾತೀತ, ಜಾತ್ಯತೀತವಾಗಿ ಅವರಿಗೆ ನೈತಿಕ ಬೆಂಬಲ ನೀಡುತ್ತಿದ್ದಾರೆ. ಅವರ ವಿರುದ್ಧ ಪೂರ್ವ ನಿಯೋಜಿತ ಸಂಚು ಮಾಡಿದಂತಿದೆ. ಸಿಡಿಯೂ ನಕಲಿ'

-ಮಹೇಶ್ ಕುಮಟಳ್ಳಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News