ಕೋವಿಡ್ ಲಸಿಕೆ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆಯಾಗಲಿ: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

Update: 2021-03-05 16:06 GMT

ಬೆಂಗಳೂರು, ಮಾ.5: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಡೀ ದೇಶ ಹಲವಾರು ಸವಾಲುಗಳನ್ನು ಎದುರಿಸಿದೆ. ದೇಶದ ಜಿಡಿಪಿ ಕುಸಿತಗೊಂಡಿದ್ದಲ್ಲದೆ, ಲಕ್ಷಾಂತರ ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನತೆಯ ನೆರವಿಗೆ ಧಾವಿಸುವುದು ಕೇಂದ್ರ ಹಾಗೂ ರಾಜ್ಯ ಸರಕಾರದ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಲಸಿಕೆ ಅಭಿವೃದ್ಧಿ ಪಡಿಸಿರುವುದು ಪತ್ರಿಯೊಬ್ಬರಲ್ಲಿಯೂ ಆಶಾಭಾವನೆ ಮೂಡಿಸುವಂತೆ ಮಾಡಿದೆ. ಎಲ್ಲರಿಗೂ ಈ ಲಸಿಕೆ ಸಿಗುವಂತಾಗಬೇಕು. ಭಾರತವು ಎರಡು ಲಸಿಕೆಗಳಿಗೆ ಅನುಮತಿ ನೀಡಿದೆ. ಆದರೆ, ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದೆ. ದೇಶದ ಜನಸಂಖ್ಯೆಯ ಶೇ.0.5ರಷ್ಟು ಅಥವಾ ಅದಕ್ಕಿಂತ ಕಡಿಮೆ ಜನರಿಗೆ ಮಾತ್ರ ಲಸಿಕೆ ಲಭ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಸ್ರೇಲ್ ದೇಶದಲ್ಲಿ ಶೇ.36ರಷ್ಟು, ಅಮೆರಿಕ ಶೇ.6 ಹಾಗೂ ಯು.ಕೆ.ನಲ್ಲಿ ಶೇ.4ರಷ್ಟು ಜನಸಂಖ್ಯೆಗೆ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಲಸಿಕೆ ಉಚಿತವಾಗಿ ಲಭ್ಯವಾದಲ್ಲಿ ಮಾತ್ರ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ. ಆದರೆ, ಕೇಂದ್ರ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ 250 ರೂ.ನಿಗದಿ ಪಡಿಸಿರುವುದು ಸರಿಯಲ್ಲ. ದೇಶದ ಶೇ.70ರಷ್ಟು ಜನರಿಗೆ ಲಸಿಕೆ ಖರೀದಿಸಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಬ್ರೆಜಿಲ್, ಕೆನಡಾ, ಯುಎಸ್‍ಎ, ಯುಕೆ ಸೇರಿದಂತೆ ಇತರ ದೇಶಗಳು ಉಚಿತವಾಗಿ ಲಸಿಕೆಗಳನ್ನು ವಿತರಿಸುವ ಮೂಲಕ ಕೋವಿಡ್ ವಿರುದ್ಧ ತ್ವರಿತವಾಗಿ ಹೋರಾಡಲು ಮುಂದಾಗಿವೆ. ಆದುದರಿಂದ, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವಿತರಿಸಬೇಕು. ಇದಕ್ಕಾಗಿ ಪಿಎಂ ಕೇರ್ಸ್ ನಿಧಿಯನ್ನು ಬಳಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಧಾನಿ ಕಾರ್ಯಾಲಯವು ಪಿಎಂ ಕೇರ್ಸ್‍ನ ಲೆಕ್ಕ ಇಡುವಲ್ಲಿ ಹಾಗೂ ಜನರಿಗೆ ಉಚಿತ ಲಸಿಕೆ ವಿತರಿಸುವಲ್ಲಿ ವಿಫಲವಾಗಿದೆ. ದೇಶದ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News