ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಪ್ರತಿ ಗ್ರಾಮದಲ್ಲಿಯೂ ಮಹಿಳೆಯರ ಕಾವಲು ಸಮಿತಿ ರಚನೆಗೆ ಆಗ್ರಹ

Update: 2021-03-05 16:45 GMT

ಬೆಂಗಳೂರು, ಮಾ. 5: ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಪ್ರತಿ ಗ್ರಾಮದಲ್ಲಿಯೂ ಐದು ಮಂದಿ ಮಹಿಳೆಯರ ಕಾವಲು ಸಮಿತಿಗಳನ್ನು ರಚನೆ ಮಾಡಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ರಾಜ್ಯದ 13 ಜಿಲ್ಲೆಗಳಲ್ಲಿ ‘ಮದ್ಯ ನಿಷೇಧ ಆಂದೋಲನ-ಕರ್ನಾಟಕ' ಚಳವಳಿ ನಡೆಸಿದೆ.

ಹೈಕೋರ್ಟ್ 2020ರ ಡಿಸೆಂಬರ್ 1ರಂದು ತೀರ್ಪು ನೀಡಿದ್ದ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಆದೇಶ ನೀಡಿದೆ. ಹೀಗಾಗಿ ಅದರನ್ವಯ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಸರಕಾರ ಕೂಡಲೇ ಕ್ರಮ ವಹಿಸಬೇಕು. ಅಲ್ಲದೆ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ವಿಶೇಷ ಗ್ರಾಮಸಭೆ ಮಾಡಲು ಆದೇಶ ನೀಡಬೇಕು ಎಂದು ಆಂದೋಲನದ ಮುಖಂಡರಾದ ಸುವರ್ಣ ಭಟ್ ಆಗ್ರಹಿಸಿದ್ದಾರೆ.

ಗ್ರಾಮಸಭೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರನ್ನು ಗುರುತಿಸಿ ಅವರ ಮೇಲೆ ಪಂಚಾಯತ್ ಕ್ರಮ ಜರುಗಿಸಬೇಕು. ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಯಚೂರು ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರತಿಭಟನೆ, ರ್‍ಯಾಲಿ, ಧರಣಿ ಸತ್ಯಾಗ್ರಹ ಹಾಗೂ ಆಂದೋಲನ ನಡೆಸಲಾಗುತ್ತಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News