ನಾಗಮೋಹನ್ ದಾಸ್, ಕೆ.ನೀಲಾರಿಗೆ ದರೈಸ್ತ್ರೀ, ವಿನ್ಸೆಂಟ್ ಕಟೀಲ್ ಗೆ ಕೆ.ಬಿ.ಕಾವ್ಯ ಪ್ರಶಸ್ತಿ

Update: 2021-03-05 17:06 GMT

ತುಮಕೂರು,ಮಾ.5: ದರೈಸ್ತ್ರೀ ಕಲ್ಚರಲ್ ಟಸ್ಟ್ ವತಿಯಿಂದ ದಲಿತ, ರೈತ ಹಾಗೂ ಸ್ತ್ರೀಯರ ಸಾಧನೆಯನ್ನು ಪ್ರತಿಬಿಂಬಿಸುವ ದರೈಸ್ತ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಮಾರ್ಚ್ 7ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದೆ ಎಂದು ದರೈಸ್ತ್ರೀ ಪ್ರಶಸ್ತಿ ಸ್ವಾಗತ ಸಮಿತಿ ಸಂಚಾಲಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಪ್ರಮುಖ ದಲಿತ ಚಿಂತಕರಾಗಿದ್ದ ಕೆ.ಬಿ.ಸಿದ್ದಯ್ಯ ಅವರು 14 ವರ್ಷ ಹಿಂದೆ ಈ ಪ್ರಶಸ್ತಿಯನ್ನು ಸ್ಥಾಪಿಸಿ 2005ರಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಆ ನಂತರ ಇದು ಎರಡನೇ ಬಾರಿಗೆ ಪ್ರಶಸ್ತಿ ಸಮಾರಂಭ ಆಯೋಜಿಸಲಾಗಿದೆ. ಈ ಬಾರಿ ನಾಡಿನ ಹಿರಿಯ ಚಿಂತಕರಾದ ನ್ಯಾ.ನಾಗಮೋಹನ್ ದಾಸ್ ಮತ್ತು ಮಹಿಳಾ ಹೋರಾಟಗಾರ್ತಿ ಹಾಗೂ ಲೇಖಕಿ ಕೆ.ನೀಲಾ ಅವರಿಗೆ ದರೈಸ್ತ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸ್ವತಃ ಕವಿಗಳಾದ ಕೆ.ಬಿ.ಸಿದ್ದಯ ಅವರ ಹೆಸರಿನಲ್ಲಿ ಕೆ.ಬಿ. ಕಾವ್ಯ ಪ್ರಶಸ್ತಿ ಸ್ಥಾಪಿಸಿದ್ದು, ಕರಾವಳಿಯ ಪ್ರತಿಭೆ ಕವಿ ವಿನ್ಸೆಂಟ್ ಕಟೀಲು ಅವರಿಗೆ ಕೆ.ಬಿ.ಕಾವ್ಯ ಪ್ರಶಸ್ತಿ ಲಭಿಸಲಿದೆ ಎಂದರು.

ಮಾರ್ಚ್ 7ರ ರವಿವಾರ ಮಧ್ಯಾಹ್ನ 3:30ಕ್ಕೆ ನಡೆಯುವ ದರೈಸ್ತ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಕೆ.ಬಿ.ಸಿದ್ದಯ್ಯ ಅವರ ಪತ್ನಿ ಗಂಗರಾಜಮ್ಮ, ದಲಿತ ಮುಖಂಡರಾದ ಕುಂದೂರ ತಿಮ್ಮಯ್ಯ, ರೈತ ಮುಖಂಡರಾದ ಎನ್.ಜಿ.ರಾಮಚಂದ್ರ ಅವರು ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೆ.ಬಿ.ಅಭಿಮಾನಿಗಳು, ಸಾಹಿತ್ಯಾಸಕ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದರೈಸ್ತ್ರೀ ಕಲ್ಚರಲ್ ಟಸ್ಟ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಸದಸ್ಯರಾದ ಕೊಟ್ಟ ಶಂಕರ್, ಡಾ.ಶಿವಣ್ಣ ತಿಮ್ಲಾಪುರ, ಕುಂದೂರು ತಿಮ್ಮಯ್ಯ, ರಾಮಾಂಜಿನಿ, ಸಿಂಗದಹಳ್ಳಿ ರಾಜಕುಮಾರ್, ಲಕ್ಷ್ಮಣ್, ಎನ್.ಜಿ.ರಾಮಚಂದ್ರಪ್ಪ, ಗೋಪಿ ಮೊಸರುಕುಡಿ, ವಿರುಪಾಕ್ಷ ಡ್ಯಾಗೇರಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News