ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ: ಕಿಮ್ಮನೆ ರತ್ನಾಕರ್ ಆರೋಪ

Update: 2021-03-05 17:24 GMT

ಶಿವಮೊಗ್ಗ, ಮಾ.5: ಭದ್ರಾವತಿಯಲ್ಲಿ ನಡೆದ ಗಲಾಟೆ ವಿಚಾರವಾಗಿ ಬಿಜೆಪಿ ಮುಖಂಡರು ನೀಡುತ್ತಿರುವ ಪಟ್ಟಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರ ರೀತಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೀಡುತ್ತಿರುವ ಪಟ್ಟಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಶಾಸಕ ಸಂಗಮೇಶ್ ಮತ್ತು ಅವರ ಕುಟುಂಬದ ಮೇಲೆ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸಂಗಮೇಶ್ ಬೆಂಗಳೂರಿನಲ್ಲಿರುವ ಕಾರಣ ಏನು ಬೇಕಾದರೂ ನಡೆಸಬಹುದು ಅಂತಾ ಇದ್ದರೆ ಇಂದೇ ಇದಕ್ಕೆಲ್ಲಾ ಅಂತ್ಯ ಹಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾವತಿಯಲ್ಲಿ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಿಲ್ಲ, ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಕೋಮುಗಲಭೆ ಸೃಷ್ಟಿಸಲು ಪ್ರಯತ್ನ ಪಡುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಸಹಕಾರ ಕೊಡುತ್ತಿದೆ ಎಂದು ದೂರಿದರು.

ಭದ್ರಾವತಿಯಲ್ಲಿ ಕಾಂಗ್ರೆಸ್ ನವರು ಏರ್ಪಡಿಸಿದ್ದ ಕಬ್ಬಡಿ ಪಂದ್ಯಾವಳಿಯಲ್ಲಿ ಬಿಜೆಪಿಯವರು ಯಾಕೆ ಭಾಗವಹಿಸಬೇಕಿತ್ತು. ಅವರು ಗಲಾಟೆ ಮಾಡಿಸುವುದಕ್ಕಾಗಿಯೇ ಅವರು ಭಾಗಿಯಾಗಿದ್ದಾರೆ. ಈಗಾಗಲೇ ಹಲವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಬಿಜೆಪಿಯವರು ಕೊಟ್ಟ ಪಟ್ಟಿಯ ಮೇಲೆ ಪೊಲೀಸರು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.

ಸಂಗಮೇಶ್ ಕುಟುಂಬದ ವಿರುದ್ದ ಸುಳ್ಳು ಕೇಸ್: ಶಾಸಕ ಸಂಗಮೇಶ್ ಹಾಗೂ ಅವರ ಕುಟುಂಬದವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.ಇದನ್ನು ಹಿಂಪಡೆಯಬೇಕು. ಮಾಜಿ ಶಾಸಕ ಅಪ್ಪಾಜಿ ಗೌಡ ಅವರು ಇಲ್ಲ, ಈಗ ಸಂಗಮೇಶ್ ಒಬ್ಬರೇ ಆಗಿದ್ದಾರೆ. ಹಾಗಾಗಿ ಅವರನ್ನು ಮಣಿಸಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು ಎಂದು ಕಿಮ್ಮನೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ನಿಂದ ಪ್ರತಿಭಟನೆ: ಭದ್ರಾವತಿಯಲ್ಲಿ ಪೊಲೀಸರು ಸುಳ್ಳು ಕೇಸ್ ದಾಖಲಿಸುತ್ತಿರುವುದನ್ನು ವಿರೋಧಿಸಿ ಮಾ.9ರಂದು ಜಿಲ್ಲಾ ಕಾಂಗ್ರೆಸ್ ನಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿ.ಪಂ ಸದಸ್ಯ  ಕಲಗೋಡು ರತ್ನಾಕರ್, ಕಾಂಗ್ರೆಸ್ ಮುಖಂಡರಾದ ಚಂದ್ರೇಗೌಡ, ವಿಜಯ್ ಕುಮಾರ್, ಪಾಲಿಕೆ ಸದಸ್ಯ ಹೆಚ್.ಸಿ ಯೋಗೇಶ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News