ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಸಚಿವರನ್ನು ಸಂಪುಟದಿಂದ ವಜಾ ಮಾಡಿ: ಸಾ.ರಾ.ಮಹೇಶ್ ಒತ್ತಾಯ

Update: 2021-03-06 09:27 GMT

ಮೈಸೂರು, ಮಾ.6:  ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯಾವುದೇ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಾಲಯದ ಮೊರೆ ಹೋಗಿರುವ ಸಚಿವರನ್ನು ಸಂಪುಟದಿಂದ ವಜಾ ಮಾಡಿ ಎಂದು ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ.

ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮತ್ತು ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಹಾಗೂ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ನ್ಯಾಯಾಲಯದ ಮೊರೆ ಹೋಗಿರುವವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಸದನದಲ್ಲೂ ಒತ್ತಾಯ ಮಾಡುತ್ತೇನೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಇವರುಗಳು ಅರ್ಜಿ ಹಾಕಿರುವುದು ನಾವೆಲ್ಲರೂ ತಲೆತಗ್ಗಿಸುವ ವಿಚಾರ. ಇದೆಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ. ಅದು ಹೊರಗೆ ಬರಬೇಕು. ಬಾಂಬೆಯಲ್ಲಿ ಅಷ್ಟೊಂದು ಟೈಟ್ ಸೆಕ್ಯೂರಿಟಿ ಇಟ್ಟುಕೊಂಡವರು ಯಾಕೆ ಅರ್ಜಿ ಹಾಕಿದ್ದಾರೆ ಎಂದು ಪ್ರಶ್ನಿಸಿದರು.

ಇವರ ಈ ನಡವಳಿಕೆ ನೋಡಿದರೆ ಇವರನ್ನು ಬ್ಲಾಕ್ ಮೇಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ ಎಂಬ ಅನುಮಾನ ಬರುತ್ತಿದೆ. ಸಚಿವರನ್ನೇ ಬ್ಲಾಕ್ ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು? ಮುಖ್ಯಮಂತ್ರಿ ಇದನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ಸಾ.ರಾ.ಮಹೇಶ್ ಆಗ್ರಹಿಸಿದರು.

ನಮ್ಮ ಸ್ನೇಹಿತರು ಬಾಂಬೆ ಡೇಸ್ ಪುಸ್ತಕ ಬರೆಯುತ್ತೇನೆ ಎಂದಾಗ ಸುಳ್ಳು ಎಂದುಕೊಂಡಿದ್ದೆ. ಅವರು ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೆಯತ್ತೇನೆ ಎಂದರು. ಬಹುಶಃ ಅದರಲ್ಲಿ ಈ ಎಲ್ಲ ವಿಚಾರಗಳು ಅದರಲ್ಲಿ ಉಲ್ಲೇಖ ಆಗಬಹುದೇನೊ ಎಂದರು.

ಇವರ ವಿಡೀಯೊ ಪ್ರಸಾರಕ್ಕೆ ತಡೆ ಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅವಮಾನ. ನಿಮಗೆ ಯಾಕೇ ಭಯ. ಮೊನ್ನೆಯೂ ಅನೇಕ ಶಾಸಕರ ವೀಡಿಯೊ ಇದೆ ಅಂತ ಹೇಳಿದ್ದರು. ಆ ಹೇಳಿಕೆ ನೀಡಿದವರನ್ನು ತಕ್ಷಣ ಯಾಕೆ ಬಂಧಿಸಲಿಲ್ಲ? ಅದೇನು ಬ್ಲಾಕ್ ಮೇಲ್ ತಂತ್ರನಾ ಎಂದವರು ಪ್ರಶ್ನಿಸಿದರು.

ತಪ್ಪು ಮಾಡಿಲ್ಲ ಎಂದರೆ ನೀವೇಕೆ ನ್ಯಾಯಾಲಯಕ್ಕೆ ಹೋಗಿದ್ದೀರಿ. ಬಾಂಬೆಗೆ ಹೋಗಿದ್ದವರ ಬಗ್ಗೆ ಇನ್ನು ಏನೇನು ಇದೆಯೊ. ಈ ರೀತಿಯ ಸರ್ಕಾರ ತರುವುದಕ್ಕೆ ಬಾಂಬೆಗೆ ಹೋಗಿದ್ದು ಇದೇನಾ ನಿಮ್ಮ ಘನ ಸಾಧನೆ ಎಂದು ಕಿಡಿಕಾರಿದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಈಗ ನಮ್ಮ ಕುಟುಂಬದವರೇ ನಮ್ಮನ್ನು ಅನುಮಾನದಿಂದ ನೋಡುವಂತಾಗಿದೆ. ಇದನ್ನು ಮಾತನಾಡುವುದಕ್ಕೆ ಅಸಹ್ಯ ಆಗುತ್ತಿದೆ. ಮನೆಯಲ್ಲಿ ಕುಟುಂಬಸ್ಥರ ಜೊತೆ ಕುಳಿತು ಟಿವಿ ನೋಡುವುದಕ್ಕೂ ಹಿಂಸೆ ಆಗುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News