ರಾಜಕಾರಣಿಗಳು ಅಂದರೆ 'ಲಫಂಗರು' ಅನ್ನುವ ರೀತಿ ಆಗುತ್ತಿದೆ: ಸಿದ್ದರಾಮಯ್ಯ

Update: 2021-03-06 14:11 GMT

ಬೆಂಗಳೂರು, ಮಾ. 6: ನನ್ನ ನಲವತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಘಟನೆಗಳನ್ನು ನೋಡಿರಲಿಲ್ಲ. ರಾಜಕಾರಣಿಗಳು ಅಂದರೆ ‘ಲಫಂಗರು' ಅನ್ನುವ ರೀತಿ ಆಗುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಕೋರ್ಟ್ ಮೊರೆ ಹೋಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಡಿ ಇದೆ ಎಂದು ಗೊತ್ತಿದ್ದರೆ ಮಾತ್ರ ಅದನ್ನು ರಾಜಕೀಯ ಷಡ್ಯಂತ್ರ ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಡಾ.ಕೆ.ಸುಧಾಕರ್ ಅವರದು ಸಿಡಿ ಇದೆಯಾ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ರಾಜಕಾರಣದಲ್ಲಿ ಕೆಲವರು ಮಾಡುವ ತಪ್ಪುಗಳಿಂದ ಜನ ಶಾಪ ಹಾಕುತ್ತಿದ್ದಾರೆ. ರಾಜಕಾರಣಿಗಳು ಎಂದರೆ ಲಫಂಗರು ಎನ್ನುವ ರೀತಿ ಆಗಿದೆ. ಸಮಾಜಕ್ಕೆ ರಾಜಕಾರಣಿಗಳ ಬಗ್ಗೆ ತಪ್ಪು ಗ್ರಹಿಕೆ ರವಾನೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದ ಅವರು, ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಬೆಂಬಲಿಗರು ಪ್ರತಿಭಟನೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಸರಿಯಲ್ಲ ಎಂದು ಆಕ್ಷೇಪಿಸಿದರು.

ಕೇಂದ್ರ ಸಚಿವ ಸದಾನಂದಗೌಡ ಸಚಿವರ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ನೋಡಿಲ್ಲ. ಹೀಗಾಗಿ ಮಾಹಿತಿ ಇಲ್ಲದೆ ಪ್ರತಿಕ್ರಿಯಿಸುವುದಿಲ್ಲ. ರಮೇಶ್ ಜಾರಕಿಹೊಳಿ ಬಗ್ಗೆಯಾಗಲಿ ಅಥವಾ ಬೇರೆ ಯಾವ ಸಚಿವರ ಬಗ್ಗೆಯಾಗಲೀ ನನಗೆ ಯಾವುದೇ ಅನುಕಂಪ ಇಲ್ಲ. ಬಿಜೆಪಿ ಸರಕಾರದಲ್ಲಿರುವ ಎಲ್ಲರೂ ಕಳ್ಳರೇ ಎಂದು ಸಿದ್ದರಾಮಯ್ಯ ಹೇಳಿದರು.

ಹೆದರಿಸಲು ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕರನ್ನು ಬೆದರಿಸಲು ಸುಳ್ಳು ಕೇಸು ಹಾಕಲಾಗುತ್ತಿದೆ. ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ ಕುಟುಂಬದ ಮೇಲೆ ಕೇಸು ಹಾಕಿ, ಅವರ ಪುತ್ರನನ್ನು ಬಂಧಿಸಲಾಗಿದೆ. ಇದರ ಹಿಂದೆ ಸಿಎಂ ಯಡಿಯೂರಪ್ಪ, ಅವರ ಪುತ್ರ ಹಾಗೂ ಸಂಸದ ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕೈವಾಡವಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಭರವಸೆ ಈಡೇರಿಸಿಲ್ಲ: ಯಡಿಯೂರಪ್ಪ ಅವರು, ಪ್ರತಿ ಬಾರಿ ಬಜೆಟ್ ಮಂಡಿಸಿದಾಗಲೂ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ, ಯಾವ ಕಾಲದಲ್ಲೂ ಅವರು ಸತ್ಯ ಹೇಳಿಲ್ಲ. ಸುಳ್ಳೇ ಅವರ ಮನೆ ದೇವರು. ನೀಡಿದ ಭರವಸೆಗಳನ್ನು ಈಡೇರಿಸುವುದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಯಾವುದೇ ಯೋಜನೆಗಳಿಗೆ ಹಣ ಇಲ್ಲ. ಹಳೆ ಯೋಜನೆಗಳನ್ನು ಮುಂದುವರಿಸಲು ಆಸಕ್ತಿ ಇಲ್ಲ. ಈ ಹಿಂದೆ ನಾವು ರೂಪಿಸಿದ್ದ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮೊದಲು ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಲಿ, ನಂತರ ಅದು ಜನಪ್ರಿಯ ಬಜೆಟ್ ಅಥವಾ ಜನವಿರೋಧಿ ಬಜೆಟ್ ಎಂಬುದನ್ನು ಚರ್ಚೆ ಮಾಡಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News