ಅಶ್ಲೀಲ ಸಿಡಿ ಬಿಡುಗಡೆ ಬೆನ್ನಲ್ಲೆ 'ಮುಂಬೈ ಸ್ನೇಹಿತರಲ್ಲಿ' ಆತಂಕ: ಸಚಿವರು ಕೋರ್ಟ್ ಮೊರೆ ಹೋಗಿದ್ದೇಕೆ ?

Update: 2021-03-06 14:55 GMT

ಬೆಂಗಳೂರು, ಮಾ. 6: ರಮೆಶ್ ಜಾರಕಿಹೊಳಿ ‘ರಾಸಲೀಲೆ' ಸಿಡಿ ಬಿಡುಗಡೆ ಬೆನ್ನಲೆ ಸಚಿವರಾದ ಡಾ.ಕೆ.ಸುಧಾಕರ್, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ನಾರಾಯಣಗೌಡ ಹಾಗೂ ಬೈರತಿ ಬಸವರಾಜು ಸೇರಿದಂತೆ, ಆಡಳಿತ ಪಕ್ಷದ ಕೆಲ ಶಾಸಕರು ಕೋರ್ಟ್ ಮೆಟ್ಟಿಲೇರಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಸೃಷಿಸಿದೆ.

ನಿನ್ನೆಯಷ್ಟೇ ಅರ್ಜಿ ಸಲ್ಲಿಸಿದ್ದ ಶಿವರಾಮ್ ಹೆಬ್ಬಾರ್ ಸೇರಿದಂತೆ ಆರು ಮಂದಿ ಸಚಿವರಿಗೆ ನಗರದ 20ನೆ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ‘ಯಾವುದೇ ಆಧಾರ ರಹಿತ, ಆಕ್ಷೇಪಾರ್ಹ ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ' 2021ರ ಮಾರ್ಚ್ 31ರ ವರೆಗೆ ನಿರ್ಬಂಧ ಹೇರಿ ಮಧ್ಯಂತರ ಆದೇಶ ಹೊರಡಿಸಿದೆ. ಹೀಗಾಗಿ ಸಚಿವರು ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.

‘ಮುಂಬೈ ಫ್ರೆಂಡ್ಸ್'ಗಳ ಆತಂಕ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಕೆಡವಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿ, ಸಚಿವ ಸ್ಥಾನದಲ್ಲಿರುವವರಿಗೆ ಇದೀಗ ಆತಂಕ ಆರಂಭವಾಗಿದೆ. ಆದರೆ ‘ನಮ್ಮನ್ನು ರಾಜಕೀಯ ಎದುರಾಳಿಗಳು ಟಾರ್ಗೆಟ್ ಮಾಡುತ್ತಿದ್ದು, ಹೀಗಾಗಿ ನಾವು ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಿದ್ದೇವೆ' ಎಂದು ಸಚಿವ ಡಾ.ಸುಧಾಕರ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ತೇಜೋವಧೆಗೆ ಮಾಧ್ಯಮಗಳ ಬಳಕೆ: ‘ರಾಜ್ಯದಲ್ಲಿ ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ಮಾಧ್ಯಮಗಳನ್ನು ಬಳಸಿಕೊಂಡು ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಇದನ್ನು ತಡೆಯಲು ನ್ಯಾಯಾಲಯದ ಮೊರೆ ಹೋಗಲಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊದಲು ಮಾಧ್ಯಮಗಳಲ್ಲಿ ಎಲ್ಲವೂ ಬರುತ್ತದೆ. ಇದರಿಂದಾಗಿ ಅನೇಕ ವರ್ಷಗಳಿಂದ ನಾವು ಸಂಪಾದಿಸಿದ ಜನಪ್ರಿಯತೆ ಹೆಸರು, ಗೌರವ ಹಾಳಾಗಿ ಚಾರಿತ್ರ್ಯವಧೆಯಾಗುತ್ತದೆ. ಇದಕ್ಕೆ ಇತಿಶ್ರೀ ಹಾಡಲು ಈ ರೀತಿ ಮಾಡಿದ್ದೇವೆ. ಇದಕ್ಕೆ ತಡೆಹಾಕಲು ಬಲವಾದ ಕಾನೂನು ರೂಪಿಸಲು ಸರಕಾರ ಚಿಂತನೆ ನಡೆಸಿದೆ' ಎಂದರು.

‘ಬೇರೆ ಕ್ಷೇತ್ರಗಳಲ್ಲೂ ಈ ರೀತಿ ನಡೆಯುತ್ತದೆ. ಒಬ್ಬ ವ್ಯಕ್ತಿಯ ತೇಜೋವಧೆ ಮಾಡಲು ತಪ್ಪು ಮಾಹಿತಿ ನೀಡಿ, ಅದಕ್ಕಾಗಿ ಸಾಮಾಜಿಕ ಜಾಲತಾಣ, ಮಾಧ್ಯಮ ಬಳಸಿಕೊಳ್ಳಲಾಗುತ್ತಿದೆ. ನೈಜತೆ ಇದ್ದಲ್ಲಿ ಅದನ್ನು ಯಾರೂ ನಿಷೇಧಿಸಲು ಸಾಧ್ಯವಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ಆದರೆ, ತೇಜೋವಧೆ ಮಾಡಬಾರದು. ಆರೋಪ ಮಾಡುವವರು ನೇರವಾಗಿ ಕೋರ್ಟ್ ಹೋಗಬಹುದು. ಆದರೆ, ಇಂತಹವರು ಕೋರ್ಟ್‍ಗೆ ಹೋಗದೆ ಬೇರೆ ಮಾರ್ಗ ಹಿಡಿದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದು ಹೊಸ ಅನೈತಿಕ, ಮೌಲ್ಯರಹಿತ ಟ್ರೆಂಡ್ ಆಗಿದೆ' ಎಂದು ಅವರು ಟೀಕಿಸಿದರು.

‘ರಷ್ಯಾ, ದುಬೈನಿಂದ ವೀಡಿಯೋ ಹಾಕುವುದು, ಸಾಮಾಜಿಕ ಜಾಲತಾಣ ಬಳಸಿಕೊಳ್ಳುವುದನ್ನು ನೋಡಿದರೆ ಇದು ಷಡ್ಯಂತ್ರ ಎನಿಸುವುದಿಲ್ಲವೇ? ಸಾರ್ವಜನಿಕ ಬದುಕಿನಲ್ಲಿ ಹಲವು ವರ್ಷಗಳಿಂದ ಇದ್ದವರಿಗೆ ಸಾಮಾಜಿಕ ಬದ್ಧತೆ, ಕಳಕಳಿ ಇರುತ್ತದೆ. ಯಾವುದೇ ಆರೋಪ ಬಂದಾಗ ಅದನ್ನು ಪರಾಮರ್ಶಿಸಬೇಕು. ನೈಜತೆ ಇದ್ದಲ್ಲಿ 24 ಗಂಟೆಯೂ ಸುದ್ದಿ ಪ್ರಸಾರ ಮಾಡಬಹುದು' ಎಂದು ಅವರು ತಿಳಿಸಿದರು.

ಪಕ್ಷಕ್ಕೆ ಮುಜುಗರ: ‘ಸಚಿವರು ಕೋರ್ಟ್‍ಗೆ ಹೋಗಿರುವುದು ಪಕ್ಷಕ್ಕೆ ಮುಜುಗರವೇ. ಇತ್ತೀಚೆಗೆ ತಂತ್ರಜ್ಞಾನ ಬಳಕೆ ಮಾಡಿ ಏನು ಬೇಕಾದರೂ ಸೃಷ್ಟಿಸಬಹುದು. ಆದರೆ, ನಾನು ಎಲ್ಲವೂ ನಕಲಿ ಎಂದು ಹೇಳುವುದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತದೆ. ನೈತಿಕತೆಗೆ ಪ್ರಾಮುಖ್ಯತೆ ನೀಡಬೇಕು. ಸಾಮಾಜಿಕ ಅಧಃಪತನದ ಬಗ್ಗೆ ಸೂಕ್ಷ್ಮತೆ ಅಗತ್ಯ. ಇಂತಹ ವಿಚಾರಗಳಲ್ಲಿ ರಾಜಕೀಯ ಲಾಭಕ್ಕೆ ಯಾರೂ ಪ್ರಯತ್ನಿಸಬಾರದು' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.

‘ವಿಧಾನ ಮಂಡಲ ಅಧಿವೇಶನ ನಡೆಯುವ ಸಮಯದಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿ ತೇಜೋವಧೆ ಮಾಡುವ ಸಂಶಯವಿತ್ತು. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ. ಹಿಂದಿನ ಸರಕಾರ ತೆಗೆಯುವಲ್ಲಿ ನಮ್ಮ ಪಾತ್ರ ಇದೆ. ಹೀಗಾಗಿ ನಮ್ಮನ್ನು ಗುರಿಯಾಗಿಸಿಕೊಳ್ಳಲಾಗಿದೆ. ನಮ್ಮನ್ನು ಯಾರೂ ಬ್ಲ್ಯಾಕ್‍ಮೇಲ್ ಮಾಡಿಲ್ಲ. ತೇಜೋವಧೆ ಆಗಬಾರದೆಂದು ಕೋರ್ಟ್ ಗೆ ಹೋಗಿದ್ದೇವೆ. ವೈಯಕ್ತಿಕ ತೇಜೋವಧೆ ಸರಿಯಲ್ಲ'
-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ

‘ಸಚಿವ ಸ್ಥಾನದಲ್ಲಿರುವವರು ರಾಜ್ಯವ್ಯಾಪಿ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅವರ ಹೆಸರಿಗೆ ಕಳಂಕ ತರಲು ಈ ರೀತಿಯ ದಾರಿ ಹುಡುಕುತ್ತಿದ್ದಾರೆ. ಯಾರದ್ದೋ ವೀಡಿಯೋಗಳಿಗೆ ಸಚಿವರ ಭಾವಚಿತ್ರ ಹಾಕಿ ಸಮಾಜದ ವಾತಾವರಣ ಹಾಳು ಮಾಡಲು ಹೊರಟಿದ್ದಾರೆ ಇಂತಹದಕ್ಕೆಲ್ಲಾ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ'
-ಬೈರತಿ ಬಸವರಾಜು, ನಗರಾಭಿವೃದ್ಧಿ ಸಚಿವ

‘ಸತ್ಯ ಹೊಸಲು ದಾಟುವುದರೊಳಗೆ, ಸುಳ್ಳು ಊರೆಲ್ಲಾ ಸುತ್ತಾಡಿಕೊಂಡು ಬಂದಿರುತ್ತದೆ ಎಂಬಂತೆ, ಜೀವಮಾನವಿಡೀ ಗಳಿಸಿರುವ ಒಳ್ಳೆಯ ಹೆಸರು, ಯಾರದೋ ಷಡ್ಯಂತ್ರದಿಂದ ಕ್ಷಣಮಾತ್ರದಲ್ಲಿ ನಶಿಸಿ ಹೋಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆಯಿಂದ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವೆ'
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

‘ಒಬ್ಬ ರೈತನ ಮಗನಾಗಿ ಯಾವುದೇ ಗಾಡ್‍ಫಾದರ್ ಇಲ್ಲದೇ ಇಷ್ಟರ ಮಟ್ಟಕ್ಕೆ ಬೆಳೆದುಬಂದಿದ್ದು ಬಹಳಷ್ಟು ಜನರಿಗೆ ಸಹಿಸಲು ಆಗುವುದಿಲ್ಲ. ಆದರೆ ಯಾವುದೋ ಕುತಂತ್ರಿಗಳ ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹೆಸರನ್ನು ಹಾಳುಗೆಡವಿ, ವಿನಾಕಾರಣ ಸತ್ಯಾಸತ್ಯತೆ ಅರಿಯದೆ ನಮ್ಮ ತೇಜೊವಧೆ ಆಗಬಾರದು ಎಂಬ ದೃಷ್ಟಿಯಲ್ಲಿ, ಮುನ್ನೆಚ್ಚರಿಕೆಯ ಕ್ರಮವಾಗಿ ಕಾನೂನಿನ ಮೊರೆ ಹೋಗಿದ್ದೇವೆ'
-ಬಿ.ಸಿ.ಪಾಟೀಲ್, ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News