×
Ad

ಹಿರಿಯ ಕೃಷಿ ವಿಜ್ಞಾನಿ ಡಾ.ಎಂ.ಮಹಾದೇವಪ್ಪ ನಿಧನ

Update: 2021-03-06 20:30 IST

ಬೆಂಗಳೂರು, ಮಾ.6: ಹಿರಿಯ ಕೃಷಿ ವಿಜ್ಞಾನಿಯೂ ಆದ ಜೆಎಸ್‍ಎಸ್ ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಎಂ.ಮಹಾದೇವಪ್ಪ (84) ಅವರು ನಿಧನರಾಗಿದ್ದಾರೆ.

ಶನಿವಾರ ಮಂಜಾನೆ ಮಹಾದೇವಪ್ಪ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಪ್ರಾರ್ಥಿವ ಶರೀರವನ್ನು ಇಲ್ಲಿನ ಚಂದ್ರಾ ಲೇಔಟ್‍ನ ಆರ್‍ಟಿಓ ಕಚೇರಿ ಬಳಿಯ ಪೈನ್‍ವುಡ್ ಅಪಾರ್ಟ್ ಮೆಂಟ್ ನಲ್ಲಿ ಇರಿಸಲಾಗಿತ್ತು. ಅಂತ್ಯಕ್ರಿಯೆಯು ಅವರ ಸ್ವಗ್ರಾಮವಾದ ಚಾಮರಾಜನಗರದ ಮಾದಾಪುರದಲ್ಲಿ ಶನಿವಾರ ಸಂಜೆ ನಡೆಯಿತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಪದ್ಮಶ್ರೀ ಡಾ.ಎಂ.ಮಹದೇವಪ್ಪ ಅವರು ಮೂಲತಃ ಚಾಮರಾಜನಗರ ಜಿಲ್ಲೆವರಾಗಿದ್ದು, ಅವರು ಕೃಷಿ ವಿಜ್ಞಾನಿಗಳ ನೇಮಕಾತಿ ಸಮಿತಿಯ ನಿವೃತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ವಿವಿಧ ತೆರನಾದ ಹೈಬ್ರಿಡ್ ಅಕ್ಕಿಯನ್ನು ಬೆಳೆಸಿದ ಕೀರ್ತಿ ಅವರಿಗಿದೆ. ಕರ್ನಾಟಕ ರಾಜೋತ್ಸವ ಪ್ರಶಸ್ತಿ (1984), ಭಾರತರತ್ನ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ (1999) ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ರೇಷ್ಮೆ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ, ಭಾರತೀಯ ವಿಜ್ಞಾನ ಬರೆಹಗಾರರ ಸಂಸ್ಥೆ ಸೇರಿದಂತೆ ಹಲವು ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪ್ರಶಸ್ತಿ ಹಾಗೂ ಫೆಲೋಶಿಪ್‍ಗಳನ್ನು ಪಡೆದಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸಿರುವ ಎಂ.ಮಹದೇವಪ್ಪ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News