‘ಆಪರೇಷನ್ ಕಮಲ’ ಕಾಂಗ್ರೆಸ್ ಸೃಷ್ಟಿಸಿದ ಗುರಾಣಿ: ಬಿಜೆಪಿ ಟೀಕೆ

Update: 2021-03-06 17:39 GMT

ಬೆಂಗಳೂರು, ಮಾ.6: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಪರೇಷನ್ ಕಮಲ ಎಂಬುದು ಕಾಂಗ್ರೆಸ್ ಸೃಷ್ಟಿಸಿದ ಗುರಾಣಿ. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 7 ಶಾಸಕರು ಅಡ್ಡ ಮತದಾನ ಮಾಡುವುದಕ್ಕೆ ಪ್ರೇರಣೆ ನೀಡಿದ್ದು ರಾಜ್ಯ ಕಾಂಗ್ರೆಸ್ ಎಂಬುದನ್ನು ರಾಜ್ಯದ ಜನತೆ ಮರೆತಿಲ್ಲ. ಒಂದು ರಾಜ್ಯಸಭಾ ಸ್ಥಾನಕ್ಕೆ ಜೆಡಿಎಸ್ ಪಕ್ಷವನ್ನು ಮುಗಿಸಿ ಮತ್ತೆ ಅವರೊಂದಿಗೆ ಮೈತ್ರಿಯ ನಾಟಕ ಮಾಡಿರುವುದು ನೀವೇ ಅಲ್ವೇ? ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

ತಮ್ಮದೇ ಪಕ್ಷದ ಶಾಸಕರ ಹಿತಾಸಕ್ತಿ ಕಾಪಾಡಲು ಸಾಧ್ಯವಾಗದ ಕಾಂಗ್ರೆಸ್, ತಮ್ಮ ಶಾಸಕರು ಅನ್ಯ ಪಕ್ಷ ಸೇರಿದಾಗ ತನ್ನ ಮೇಲಿನ ನಿಷ್ಕ್ರಿಯತೆಯನ್ನು ಮುಚ್ಚಿಹಾಕಲು ಸೃಷ್ಟಿಸಿದ ಪದವೇ ಆಪರೇಷನ್ ಕಮಲ. ದೇವರಾಜ ಅರಸು ಸರಕಾರವನ್ನು ಈ ಹಿಂದೆ ಕಾಂಗ್ರೆಸ್ ಪಕ್ಷದ ದಿಲ್ಲಿ ನಾಯಕರು ಬುಡಮೇಲುಗೊಳಿಸಿದ್ದಕ್ಕೆ ಏನೆನ್ನುತ್ತೀರಿ? ಅದು, ಆಪರೇಷನ್ ಹಸ್ತವೇ? ಎಂದು ಬಿಜೆಪಿ ಪ್ರಶ್ನಿಸಿದೆ.

ವಲಸೆ ನಾಯಕ ಸಿದ್ದರಾಮಯ್ಯ ಅವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತವಾಗಿರುವುದು ತಿಳಿದಿಲ್ಲವೇನೋ. ಮೋದಿ ಅವರ ಪ್ರಭಾವ ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಉರಿ ತಡೆದುಕೊಳ್ಳಲಾಗುತ್ತಿಲ್ಲ. ಮಾನ್ಯ ಪಕ್ಷಾಂತರದ ದೊರೆಗಳೇ, ಅನ್ಯ ರಾಷ್ಟ್ರಗಳಲ್ಲಿ ಮತ್ತು ಭಾರತದಲ್ಲಿ ಇರುವ ಲಸಿಕೆಯ ದರವನ್ನು ನೋಡಿಬಿಡಿ ಎಂದು ಬಿಜೆಪಿ ಹೇಳಿದೆ.

ಮಾನ್ಯ ಸಿದ್ದರಾಮಯ್ಯ ಅವರೇ ನಿಮ್ಮ ಕಳಕಳಿಗೆ ಅಭಿನಂದಿಸುತ್ತೇವೆ. ಆದರೆ ಇದು ನಿಮ್ಮ ರಾಜಕೀಯ ನಿಲುವಿನ ಮತ್ತೊಂದು ಮಗ್ಗಲು ಅಷ್ಟೇ. ನೀವು ಜನರ ಪರವಾಗಿ ಮಾತನಾಡುತ್ತಿಲ್ಲ. ಇದು ಇಮೇಜ್ ಹೆಚ್ಚಿಸಿಕೊಳ್ಳುವ ಒಂದು ತಂತ್ರ ಅಷ್ಟೇ. ಜಗತ್ತಿನ ಯಾವುದೇ ದೇಶಕ್ಕೆ ಹೋಲಿಸಿದರೂ ಅತ್ಯಂತ ಕಡಿಮೆ ದರದಲ್ಲಿ ಲಸಿಕೆ ಪೂರೈಸುತ್ತಿರುವ ಏಕೈಕ ದೇಶ ಭಾರತ ಎಂದು ಬಿಜೆಪಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News