ಮಂಡ್ಯ: ಕೃಷಿ ಕಾಯ್ದೆಗಳ ರದ್ದು, ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಆಗ್ರಹಿಸಿ ಧರಣಿ

Update: 2021-03-06 18:06 GMT

ಮಂಡ್ಯ, ಮಾ.6: ಕೃಷಿ ಮತ್ತಿತರೆ ಕಾಯ್ದೆಗಳ ರದ್ದು, ಇಂಧನ, ಅಗತ್ಯ ವಸ್ತುಗಳ ಬೆಲೆ ಇಳಿಕೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟಿಸಿ ಕರಾಳ ದಿನಾಚರಣೆ ಆಚರಿಸಲಾಯಿತು.

ಹೊಸಹಳ್ಳಿ ವೃತ್ತದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕೈಜೋಡಿಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಹಾಗೂ ಕೃಷಿ ಕೂಲಿಕಾರರು ಮತ್ತು ಕಸುಬುದಾರರ ಕೈಗಳಿಂದ ಕೃಷಿಯನ್ನು, ಉಪ ಕಸುಬುಗಳನ್ನು ಕಿತ್ತುಕೊಂಡು ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡಲು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹುನ್ನಾರ ನಡೆಸಿವೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರಕಾರದ ರೈತ, ಕೂಲಿಕಾರರ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಜನರನ್ನು ರಕ್ಷಿಸುವ ಬದಲು ಯಡಿಯೂರಪ್ಪ ನೇತೃತ್ವದ ಬಿಜೆಪಿಯ ರಾಜ್ಯ ಸರಕಾರವೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇದ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ ಎಂದು ಅವರು ಕಿಡಿಕಾರಿದರು.

ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಪೆಟ್ರೋಲ್, ಡೀಸಲ್, ಗ್ಯಾಸ್, ಅಡುಗೆ ಎಣ್ಣೆ, ಈರುಳ್ಳಿ, ಬೇಳೆ, ಇತರೆ ಅಗತ್ಯವಸ್ತುಗಳ ದರ ಇಳಿಸಬೇಕು. ಉದ್ಯೋಗ ಖಾತ್ರಿಯಲ್ಲಿ ದಿನಕ್ಕೆ 600 ರೂ. ಕೂಲಿ ನಿಗದಿಪಡಿಸಿ 200 ದಿನ ಕೆಲಸ ಕೊಡಬೇಕು. ವಸತಿರಹಿತ ಬಡವರಿಗೆ ನಿವೇಶನ, ಮನೆ ನೀಡಬೇಕು. ಬಗರ್ ಹುಕುಂ ಸಾಗುವಳಿಗಾರರ ಜಮೀನನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕೃಷಿ ಕೂಲಿಕಾರರ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ್ ಮಾತನಾಡಿ, ರೈತರ ಐತಿಹಾಸಿಕ ಬೃಹತ್ ಚಳವಳಿಗೂ ಸ್ಪಂದಿಸದ ಹಾಗೂ ಚುನಾವಣೆಗಳ ಸಮಯದಲ್ಲೂ ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆ ದಿನದಿನವೂ ಏರಿಸುವ ಬಿಜೆಪಿ ಸರಕಾರದ ಭಂಡತನದ ಮೂಲ ಏನು ಎಂಬುದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಎಚ್ಚರಿಸಿದರು.

ರೈತ ವಿರೋಧಿ ಕೃಷಿ ಕಾಯ್ದೆಗಳು, ಪೆಟ್ರೋಲ್, ಡೀಸಲ್, ಗ್ಯಾಸ್, ಅಗತ್ಯವಸ್ತುಗಳ ಬೆಲೆ ಏರಿಕೆ ಬಗ್ಗೆ ಮಂಡ್ಯದ ಸಂಸದೆ ಸುಮಲತಾ ಅವರು ಸಂಸತ್‍ನಲ್ಲಿ ಮಾತನಾಡುತ್ತಿಲ್ಲ. ಹಾಗೆಯೇ ಜಿಲ್ಲೆಯ ಶಾಸಕರೂ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಚಕಾರವೆತ್ತುತ್ತಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಲೇಖಕ ಪ್ರೊ.ಜಿ.ಟಿ.ವೀರಪ್ಪ, ಚಿಂತಕ ಪ್ರೊ.ಹುಲ್ಕೆರೆ ಮಹದೇವ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಕೆ.ಹನುಮೇಗೌಡ, ಶಿವಮಲ್ಲಯ್ಯ, ಕೆ.ಬಸವರಾಜು, ಸರೋಜಮ್ಮ, ಶಭಾವತಿ, ಶಾಂತಮ್ಮ, ಅಮಾಸಯ್ಯ, ಅಜಯ್‍ಕುಮಾರ್, ಗಿರೀಶ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News