ನಿರ್ಗತಿಕ ಸಹೋದರಿಯರಿಗೆ ತಮ್ಮ ವೇತನದ ಹಣದಿಂದ ಮನೆ ನಿರ್ಮಿಸಿಕೊಟ್ಟ ಅಧಿಕಾರಿಗಳು

Update: 2021-03-06 18:14 GMT

ಸಕಲೇಶಪುರ: ತಮ್ಮ ವೇತನದಿಂದ ನಿರ್ಗತಿಕ ಸಹೋದರಿಯರಿಗೆ ಮನೆ ನಿರ್ಮಿಸಿ, ಉಡುಗೊರೆಯಾಗಿ ನೀಡುವ ಮೂಲಕ ತಾಲೂಕಿನ ಅಧಿಕಾರಿಗಳು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಿರ್ಗತಿಕ ಯುವತಿಯರಿಗೆ ತಾಲೂಕು ಅಧಿಕಾರಿಗಳು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಉಡುಗೊರೆಯಾಗಿ ನೀಡಿದ್ದಾರೆ. ತಾಲೂಕಿನ ಮಳಲಿ ಗ್ರಾಮದಲ್ಲಿ ವಾಸವಾಗಿರುವ ಚಂದ್ರಕಲಾ (21) ಅರುಣಾಕ್ಷಿ (20) ಸಹೋದರಿಯರು ಕಳೆದ ಮಳೆಗಾಳದ ಸಂದರ್ಭದಲ್ಲಿ ಬಿದ್ದು ಹೋಗಿದ್ದ ಮನೆಯಲ್ಲಿ ಪ್ಲಾಸ್ಟಿಕ್ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು.

ಇದನ್ನು ಕಂಡ ಅಧಿಕಾರಿಗಳು ಇವರಿಗೆ ಸರಕಾರದ ವತಿಯಿಂದ ಸಹಾಯ ಮಾಡಲು ಮುಂದಾದರು. ಆದರೆ ಅನೇಕ ತಾಂತ್ರಿಕ ತೊಡಕುಗಳಿಂದ ಸಾಧ್ಯವಾಗಿರಲಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ್ ಹಾಗೂ ಇತರ ಅಧಿಕಾರಿಗಳು ತಮ್ಮ ವೇತನದಿಂದ ಹಣವನ್ನು ಒಟ್ಟುಗೂಡಿಸಿ, ಗ್ರಾಮ ಪಂಚಾಯತ್ ನಿಂದ 8 ಸಾವಿರ ರೂ. ಸಂಗ್ರಹಿಸಿ ಮನೆ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಿದರು. ದಾನಿಗಳಿಂದ ಹಾಗೂ ನೌಕರರ ಸಂಬಳದಿಂದ ಸಂಗ್ರಹವಾದ ಹಣದಿಂದ 4 ಲಕ್ಷ ರೂ. ವೆಚ್ಚದಲ್ಲಿ ಒಂದು ಸುವ್ಯವಸ್ಥಿತವಾದ ಮನೆಯನ್ನು ನಿರ್ಮಿಸಿದರು. 

ಶುಕ್ರವಾರ ನಿರ್ಗತಿಕ ಹೆಣ್ಣು ಮಕ್ಕಳಿಗೆ ಅಧಿಕಾರಿಗಳು ಮನೆಯ ಕೀ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹರೀಶ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಸಹೋದರಿಯರ ಸಂತಸ: ನಮಗೆ ಅಧಿಕಾರಿಗಳು ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಇದು ನಮಗೆ ಬಹಳ ಖುಷಿ ನೀಡಿದೆ. ನಮಗೆ ಒಂದು ಮನೆ ಇತ್ತು. ಅದು ಮಳೆ ಗಾಳಿಗೆ ಬಿದ್ದುಹೋಗಿತ್ತು. ನಾವು ಬದುಕಲು ಬಹಳಷ್ಟು ಕಷ್ಟ ಪಡುತ್ತಿದ್ದೆವು ಈ ಸಂದರ್ಭದಲ್ಲಿ ನಮ್ಮ ಕಷ್ಟಗಳನ್ನು ನೋಡಿದ ಅಧಿಕಾರಿಗಳು ಸ್ಪಂದಿಸಿದ್ದಾರೆ. ನಾವು ಅಧಿಕಾರಿಗಳಿಗೆ ಚಿರಋಣಿಯಾಗಿರುತ್ತೇವೆ. ಮನಃಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಸಹೋದರಿಯರಾದ ಚಂದ್ರಕಲಾ ಹಾಗೂ ಅರುಣಾಕ್ಷಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News