ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ: ಸೋಮವಾರ ಆಯವ್ಯಯ ಮಂಡಿಸಲಿರುವ ಸಿಎಂ ಯಡಿಯೂರಪ್ಪ
ಬೆಂಗಳೂರು, ಮಾ. 7: ಕೊರೋನ ಸಂಕಷ್ಟದಿಂದಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ಖೋತಾ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯ ನಡುವೆ ನಾಳೆ (ಮಾ.8) ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂಡಿಸಲಿರುವ 2021-22ನೆ ಸಾಲಿನ ಆಯವ್ಯಯದ ಮೇಲೆ ರಾಜ್ಯದ ಜನತೆಯ ದೃಷ್ಟಿನೆಟ್ಟಿದೆ.
ನಾಳೆ ಮಧ್ಯಾಹ್ನ 11:30ಕ್ಕೆ ಆಯವ್ಯಯ ಅನುಮೋದಿಸಲು ವಿಶೇಷ ಸಂಪುಟ ಸಭೆ ನಡೆಸಲಿರುವ ಸಿಎಂ ಯಡಿಯೂರಪ್ಪ, 12 ಗಂಟೆಗೆ ವಿಧಾನಸಭೆಯಲ್ಲಿ 2021-22ನೆ ಸಾಲಿನ ಬಜೆಟ್ ಮಂಡಿಸದ್ದಾರೆ. ಎಂಟನೆ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾಗಿರುವ ಯಡಿಯೂರಪ್ಪನವರು ಸಾಮಾನ್ಯ ಜನರಿಗೆ ಹೊರೆಯಾಗದ ಬಜೆಟ್ ಮಂಡಿಸಲಿದ್ದಾರೆಂದು ಹೇಳಲಾಗುತ್ತಿದೆ.
ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ, ನೀರಾವರಿ ಹಾಗೂ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸೇರಿದಂತೆ ಅಶಕ್ತರಿಗೆ ಆದ್ಯತೆ ನೀಡಲು ಉದ್ದೇಶಿಸಿರುವ ಯಡಿಯೂರಪ್ಪನವರ ಬಜೆಟ್ ಮೇಲೆ ಪ್ರತಿವರ್ಷದಂತೆಯೂ ಈ ಬಾರಿಯೂ ನಿರೀಕ್ಷೆಗಳು ಹೆಚ್ಚಾಗಿವೆ. ಎಲ್ಲ ಸಮುದಾಯಗಳನ್ನು ಗಣನೆಗೆ ತೆಗೆದುಕೊಂಡು ಉತ್ತಮ ಬಜೆಟ್ ಮಂಡಿಸಲು ಕಾರ್ಯತಂತ್ರ ರೂಪಿಸಿದ್ದಾರೆ.
ಸೋಂಕಿನ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಯಾವ ಪ್ರಸ್ತಾವವನ್ನು ಅನುಸರಿಸಲಿದ್ದಾರೆಂಬುದು ಕುತೂಹಲ ಸೃಷ್ಟಿಸಿದೆ. ಸುಮಾರು 89 ಸಾವಿರ ಕೋಟಿ ರೂ.ಗಳಷ್ಟು ಸಾಲ ಪಡೆದುಕೊಳ್ಳಲು ಕೇಂದ್ರ ಸರಕಾರ ಸಮ್ಮತಿಸಿದ್ದರೂ, ದೊಡ್ಡ ಮೊತ್ತದ ಸಾಲದ ಜೊತೆಗೆ ಹಳೆಯ ಸಾಲಕ್ಕೆ 25 ಸಾವಿರ ಕೋಟಿ ರೂ.ಗಳಷ್ಟು ಬಡ್ಡಿ ಪಾವತಿಸಬೇಕಾದ ಹೊಣೆಯೂ ಸಿಎಂ ಬಿಎಸ್‍ವೈ ಅವರ ಮೇಲಿದೆ.
ಪೆಟ್ರೋಲ್, ಡೀಸೆಲ್, ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯ ತತ್ತರಿಸಿ ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಇಂಧನ ದರದ ಮೇಲಿನ ಸುಂಕ ಕಡಿತ ಮಾಡಬೇಕೆಂಬ ಒತ್ತಡಗಳು ಕೇಳಿ ಬಂದಿವೆ. ಆದರೆ, ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.
ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡಿದರೆ ರಾಜ್ಯಕ್ಕೆ ಬರುವ ಆದಾಯದಲ್ಲಿ ಖೋತಾ ಆಗಲಿದೆ. 2020-21ನೆ ಸಾಲಿನಲ್ಲಿ 2.37 ಲಕ್ಷ ಕೋಟಿ ರೂ.ಬಜೆಟ್ ಮಂಡಿಸಲಾಗಿತ್ತು. ಆದರೆ, ಈ ಬಾರಿ ಬಜೆಟ್ ಮಂಡನೆಯ ಗಾತ್ರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.
ಈ ಮಧ್ಯೆ ಬೆಳಗಾವಿ ಲೋಕಸಭಾ ಕ್ಷೇತ್ರ, ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಸಿಂಧಗಿ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಆ ಕ್ಷೇತ್ರಗಳಿಗೂ ಬಜೆಟ್‍ನಲ್ಲಿ ವಿಶೇಷ ಕೊಡುಗೆ ನೀಡಲು ಸಾಧ್ಯತೆಗಳಿವೆ. ಜೊತೆಗೆ ತಾವು ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ಆಯವ್ಯಯದಲ್ಲಿ ಪ್ರಾತಿನಿಧ್ಯ ನೀಡುವ ನಿರೀಕ್ಷೆ ಇದೆ.