ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ, ಸಿಡಿ ಬಿಡುಗಡೆಗೆ 15 ಕೋಟಿ ರೂ. ವೆಚ್ಚ: ಬಾಲಚಂದ್ರ ಜಾರಕಿಹೊಳಿ ಆರೋಪ

Update: 2021-03-07 13:30 GMT

ಬೆಂಗಳೂರು, ಮಾ. 7: ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಮಗ್ರ ತನಿಖೆ ಆಗಬೇಕಿದೆ. ಆ ಹಿನ್ನೆಲೆಯಲ್ಲಿ ಈ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು. ಜಾರಕಿಹೊಳಿ ಕುಟುಂಬ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ತರಲು ಕೆಲವರು ಸಂಚು ರೂಪಿಸಿದ್ದಾರೆ' ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ದೂರಿದ್ದಾರೆ.

ರವಿವಾರ ಇಲ್ಲಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಮಾಧ್ಯಮಗಳಲ್ಲಿ ಸಿಡಿಯಲ್ಲಿರುವ ಮಹಿಳೆಯನ್ನು ಸಂತ್ರಸ್ತೆ ಎಂದು ತೋರಿಸಲಾಗುತ್ತಿದೆ. ಸಂತ್ರಸ್ತೆಯ ಮೂಲಕ ಹನಿಟ್ರ್ಯಾಪ್ ನಡೆಸಲಾಗಿದ್ದು, 15 ಕೋಟಿ ರೂ.ಗಳಷ್ಟು ವೆಚ್ಚ ಮಾಡಿ ರಷ್ಯಾದಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‍ಲೋಡ್ ಮಾಡಲಾಗಿದೆ' ಎಂದು ಆರೋಪಿಸಿದರು.

‘ಈಗಾಗಲೇ ದಿನೇಶ್ ಕಲ್ಲಹಳ್ಳಿ ಪ್ರಕರಣಕ್ಕೆ ಸಂಬಂಧ ತಮ್ಮ ದೂರು ಹಿಂಪಡೆದಿದ್ದಾರೆ. ಕಲ್ಲಹಳ್ಳಿ ದೂರು ದಾಖಲಿಸುವ 3 ಗಂಟೆ ಮೊದಲು ವೀಡಿಯೋ ಅಪ್ ಲೋಡ್ ಮಾಡಲಾಗಿತ್ತು. ಜಾರಕಿಹೊಳಿ ಕುಟುಂಬದ ಹೆಸರು ಹಾಳು ಮಾಡಲು ಷಡ್ಯಂತ್ರ ಮಾಡಲಾಗಿದೆ. ಇದರ ಹಿಂದೆ ಯುವತಿ ಸೇರಿದಂತೆ ಆರೇಳು ಮಂದಿ ಇದ್ದಾರೆ' ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

‘ಈ ಪ್ರಕರಣದಿಂದ ನೊಂದಿರುವ ರಮೇಶ್ ಜಾರಕಿಹೊಳಿ ಅವರು ಕೂಡಲೇ ಮನೆಯಿಂದ ಹೊರ ಬಂದು ದೂರು ದಾಖಲಿಸಬೇಕು. ಅಥವಾ ಅವರಿಗೆ ದೂರು ನೀಡಲು ಸಾಧ್ಯವಿಲ್ಲದಿದ್ದರೆ ನಾವು ದೂರು ನೀಡಲು ಅನುಮತಿ ನೀಡಬೇಕು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದ್ದು, ಕಾನೂನು ರೂಪಿಸಬೇಕಿದೆ' ಎಂದು ಅವರು ಹೇಳಿದರು.

ರಮೇಶ್ ಜಾರಕಿಹೊಳಿ ಅವರು ಕುಟುಂಬ ಮತ್ತು ಪಕ್ಷಕ್ಕೆ ಮುಜುಗರ ಸೃಷ್ಟಿಸುವ ಉದ್ದೇಶದಿಂದಲೇ ಈ ಕೃತ್ಯ ನಡೆಸಲಾಗಿದೆ. ನಮ್ಮ ಮೂಲಗಳ ಪ್ರಕಾರ ಮಹಿಳೆ ಮುಂದೆ ತನ್ನ ಭವಿಷ್ಯದ ಬಗ್ಗೆ ಆ ಕಾಣದ ಕೈಗಳಿಗೆ ಹೇಳಿದಾಗ ಆಕೆಗೆ 50 ಲಕ್ಷ ರೂ. ಹಣ ನೀಡಿ ದುಬೈನಲ್ಲಿ ಕೆಲಸ ಕೊಡಿಸುವ ಆಮಿಷ ನೀಡಿದ್ದಾರೆ. ಈ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದರು.

ಪ್ರಕರಣ ಸಂಬಂಧ ದೂರು ನೀಡಿದ ದಿನೇಶ್ ಕಲ್ಲಹಳ್ಳಿಗೆ ಪೂರ್ಣ ಮಾಹಿತಿ ಇಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಕಲ್ಲಹಳ್ಳಿ ಅವರನ್ನೂ ಈ ಪ್ರಕರಣದಲ್ಲಿ ಟ್ರ್ಯಾಪ್ ಮಾಡಲಾಗಿದೆ. ಹೀಗಾಗಿ ಕಲ್ಲಹಳ್ಳಿ ತಮ್ಮ ವಕೀಲರ ಜೊತೆ ಸಮಾಲೋಚನೆ ನಡೆಸಿ ಪ್ರಕರಣ ಹಿಂಪಡೆದಿದ್ದಾರೆ ಎಂದ ಬಾಲಚಂದ್ರ ಜಾರಕಿಹೊಳಿ, ಆಡಿಯೋ ಮತ್ತು ವಿಡಿಯೋ ಸತ್ಯಾಸತ್ಯತೆ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ. ಹೀಗಾಗಿ ಪ್ರಕರಣ ಸಿಬಿಐಗೆ ಒಪ್ಪಿಸಲು ಸಿಎಂಗೆ ಮನವಿ ಮಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News