ಅಶ್ಲೀಲ ಸಿಡಿ ಪ್ರಕರಣಕ್ಕೆ ತಿರುವು: ದೂರು ವಾಪಸ್ ಪಡೆಯಲು ಮುಂದಾದ ದಿನೇಶ್ ಕಲ್ಲಹಳ್ಳಿ

Update: 2021-03-07 13:47 GMT

ಬೆಂಗಳೂರು, ಮಾ.7: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ದಿನೇ ದಿನೇ ತಿರುವು ಪಡೆಯುತ್ತಿದ್ದು, ಮುಖ್ಯ ದೂರುದಾರ ದಿನೇಶ್ ಕಲ್ಲಹಳ್ಳಿ ಅವರು ದೂರು ವಾಪಸ್ಸು ಪಡೆಯಲು ಮುಂದಾಗಿದ್ದಾರೆ.

ಲೈಂಗಿಕ ಸಂಪರ್ಕ ಕುರಿತು ತನಿಖೆ ನಡೆಸುವಂತೆ ಕೋರಿ ಇತ್ತೀಚಿಗಷ್ಟೇ ದಿನೇಶ್ ಕಲ್ಲಹಳ್ಳಿ ಅವರು ಇಲ್ಲಿನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಪೊಲೀಸರು ಪ್ರಾಥಮಿಕ ತನಿಖೆಯತ್ತ ಹೆಜ್ಜೆ ಹಾಕಿದ್ದರು. ಆದರೆ, ದಿನೇಶ್ ಕಲ್ಲಹಳ್ಳಿ ಅವರು ರವಿವಾರ ದೂರು ವಾಪಸ್ಸು ಪಡೆಯುತ್ತೇನೆ ಎಂದು ಪ್ರಕಟಿಸಿದ್ದು ಕುತೂಹಲ ಉಂಟು ಮಾಡಿದೆ.

ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಪೊಲೀಸರು ಹೆಚ್ಚಾಗಿ ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ. ಲಿಖಿತ ದೂರು ಹಿನ್ನೆಲೆ ದೂರುದಾರ ನ್ಯಾಯಾಲಯದ ಮೊರೆಯೂ ಹೋಗಬಹುದು ಎಂದು ಪೊಲೀಸರು ತನಿಖೆಯತ್ತ ಸಾಗಿದ್ದರು. ಇದೀಗ ಮುಖ್ಯ ದೂರುದಾರನೇ ಪ್ರಕರಣ ಕೈಬಿಡುವಂತೆ ಹೇಳಿರುವುದು, ತನಿಖೆಗೆ ಭಾರೀ ಹಿನ್ನಡೆಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರು ಹಿಂಡೆಯಲು ಪತ್ರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆಯಲು ಮುಂದಾಗಿರುವ ದಿನೇಶ್ ಕಲ್ಲಹಳ್ಳಿ, ಈ ಬಗ್ಗೆ ಕಬ್ಬನ್ ಪಾರ್ಕ್ ಇನ್‌ಸ್ಪೆಕ್ಟರ್ ಅವರಿಗೆ ಪತ್ರ ಬರೆದಿದ್ದಾರೆ. ರಮೇಶ್ ಜಾರಕಿಹೊಳಿ ಅವರ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯ ದೂರನ್ನು ಹಿಂಪಡೆಯುತ್ತಿದ್ದೇನೆ. ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ ಎಂದಿದ್ದಾರೆ‌.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ತರಲಿದೆ. ಮಾಹಿತಿ ನೀಡುವವರನ್ನೇ ಗುರಿಯಾಗಿಸಿಕೊಂಡಿರುವುದು ಬಹಳ ನೋವಿನ ಸಂಗತಿ. ಇಂದಿನ ವ್ಯವಸ್ಥೆ ಆ ರೀತಿ ಆಗಿದೆ. ಅಲ್ಲದೆ, ಬಟ್ಟೆಯ ಮೇಲೆ ಮುಳ್ಳು ಬಿದ್ದರೂ, ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ ಹರಿಯುವುದು ಬಟ್ಟೆಯೇ ಎಂಬುದನ್ನು ಈ ಹಿಂದೆ ಮಹಿಳೆಯರ ವಿಷಯದಲ್ಲಿ ಬಳಕೆ ಮಾಡಲಾಗುತ್ತಿತ್ತು. ದುರದೃಷ್ಟವಶಾತ್ ಈಗಿನ ಸುಸಂಸ್ಕೃತ ನಾಗರಿಕ ಸಮಾಜದಲ್ಲಿ ಮಹಿಳೆಯರ ವಿಚಾರದಲ್ಲಿ ಇದೇ ರೀತಿ ನಡೆಯುತ್ತಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವರದ್ದು ಎನ್ನಲಾದ ಲೈಂಗಿಕ ದೌರ್ಜನ್ಯ ಸಿಡಿಯನ್ನು ಪೊಲೀಸರಿಗೆ ದೂರಿನ ಜೊತೆಗೆ ಒಪ್ಪಿಸಿದ್ದೆ. ಆದರೆ ಈಗ ಇಡೀ ಸಮಾಜದಲ್ಲಿ ಮಹಿಳೆಯ ಚಾರಿತ್ರ್ಯ ಹರಣ ನಡೆಯುತ್ತಿದೆ ಎಂದಿರುವ ಅವರು, ರಾಜಕೀಯ ಕೇಂದ್ರಿತ ಅಧಿಕಾರದಿಂದ ಸಂತ್ರಸ್ತೆಯನ್ನೇ ಆರೋಪಿಯನ್ನಾಗಿ‌ ಮಾಡುವ ಹುನ್ನಾರ ನಡೆದಿದೆ. ಇದು ಬೇಸರ ತರಿಸಿದೆ. ದೂರು ನೀಡಿದ ಉದ್ದೇಶವನ್ನೇ ಮರೆತು ವ್ಯವಸ್ಥೆ ವರ್ತಿಸುತ್ತಿದೆ. ಸಂತ್ರಸ್ತೆ ಹಾಗೂ ನನಗೆ ಇದು ತಿರುಗುಬಾಣವಾಗುತ್ತಿದೆ. ಹೀಗಾಗಿ, ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಿ, ನಾನು ದೂರು ಹಿಂಪಡೆಯುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೂರು ವಾಪಸ್ ಇಲ್ಲ ?: ದಿನೇಶ್ ಕಲ್ಲಹಳ್ಳಿ ಅವರ ಪತ್ರಕ್ಕೆ ಉತ್ತರಿಸಿರುವ ಪೊಲೀಸರು, ದೂರು ಹಿಂಪಡೆಯಲು ಠಾಣಾ ಮಟ್ಟದಲ್ಲಿ ಅವಕಾಶವಿಲ್ಲವೆಂದು ಹೇಳಿರುವುದಾಗಿ ವರದಿಯಾಗಿದೆ.

ನಿಮ್ಮ ದೂರು ಆಧರಿಸಿ ಮಾಹಿತಿ‌ ಸಂಗ್ರಹಿಸಲಾಗುತ್ತಿದೆ‌. ಎಫ್ಐಆರ್ ದಾಖಲಿಸುವ ಹಂತಕ್ಕೆ ಬಂದು ನಿಂತಿದ್ದೇವೆ. ಯುವತಿಯನ್ನೂ ಪತ್ತೆ ಮಾಡಲಾಗಿದ್ದು, ಹೇಳಿಕೆ ಪಡೆಯುವುದು ಬಾಕಿ ಇದೆ' ಎಂದೂ ಪೊಲೀಸರು ತಿಳಿಸಿರುವುದಾಗಿ‌ ಗೊತ್ತಾಗಿದೆ.

ರವಿವಾರ ಇಲ್ಲಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದಿನೇಶ್ ಕಲ್ಲಹಳ್ಳಿ ಪರವಾಗಿ ಅವರ ವಕೀಲರು ಪತ್ರ ನೀಡಿದ್ದಾರೆ. ಅದನ್ನು ಪೊಲೀಸರು ಸ್ವೀಕರಿಸಿದ್ದು, ಮೌಖಿಕವಾಗಿಯೇ ಉತ್ತರಿಸಿ‌ ಕಳುಹಿಸಿದ್ದಾರೆ ಎನ್ನಲಾಗಿದೆ ‌ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಠಾಣಾ ಸಿಬ್ಬಂದಿ ನಿರಾಕರಿಸಿದರು.

ನನ್ನ ಬಳಿ ಸಿಡಿ ಇಲ್ಲ: ಸಚಿವರು, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಯಾವುದೇ ಸಿ.ಡಿ, ದಾಖಲೆಗಳು ನನ್ನ ಬಳಿ ಇಲ್ಲ.ಆದರೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದ ಸಂತ್ರಸ್ತ ಮಹಿಳೆಯರು ಇದ್ದರೆ ಅವರಿಗೆ ನೈತಿಕ ಮತ್ತು ಕಾನೂನು ಬೆಂಬಲ ನೀಡಲು ಸಿದ್ಧನಿದ್ದೇನೆ.

-ರಾಜಶೇಖರ ಮುಲಾಲಿ, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News