ಡಿಕೆಶಿ- ಸಿದ್ಧರಾಮಯ್ಯ ಜೋಡೆತ್ತುಗಳಲ್ಲ, ಕಾದಾಟಕ್ಕೆ ನಿಂತ ಹೋರಿಗಳು ಎಂದ ಸಚಿವ ಶ್ರೀರಾಮುಲು

Update: 2021-03-07 15:36 GMT

ಹುಬ್ಬಳ್ಳಿ, ಮಾ. 7: ‘ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೋಡೆತ್ತುಗಳಲ್ಲ. ಅವರು ಮುಖ್ಯಮಂತ್ರಿ ಕುರ್ಚಿ ಆಸೆಗಾಗಿ ಕಾದಾಟಕ್ಕೆ ನಿಂತ ಹೋರಿಗಳಿದ್ದಂತೆ' ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ತೆರಿಗೆ ಹಣದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಲಾಗುತ್ತಿದೆ. ಆದರೆ, ಪ್ರತಿಪಕ್ಷಗಳು ಸದನವನ್ನು ಸುಗಮವಾಗಿ ನಡೆಸಲು ಬಿಡುತ್ತಿಲ್ಲ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಡಿ ಪ್ರಕರಣದ ಹಿಂದೆ ಹಲವರ ಕೈವಾಡವಿದೆ. ಕಾಂಗ್ರೆಸ್ ನಾಯಕರು, ಸಂಘ-ಸಂಸ್ಥೆಗಳು ಹಾಗೂ ಬೇರೆ ಯಾರೆಲ್ಲಾ ಇದ್ದಾರೆ ಅನ್ನುವುದು ತನಿಖೆಯಿಂದ ಹೊರಬರಬೇಕಾಗಿದೆ ಎಂದ ಶ್ರೀರಾಮುಲು, ಬಿಜೆಪಿ ಸರಕಾರ ಬರಲು ಪಕ್ಷ ತೊರೆದು ಬಂದು ಬಿಜೆಪಿ ಸೇರಿದ ಶಾಸಕರ ತೇಜೋವಧೆ ಯತ್ನ ನಡೆಯುತ್ತಿದೆ ಎಂದು ದೂರಿದರು.

ಆರು ಮಂದಿ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಸಿಡಿ ಎಂದ ಕೂಡಲೇ ರಾಸಲೀಲೆ, ಹನಿಟ್ರ್ಯಾಪ್ ಅಷ್ಟೇ ಅಲ್ಲ, ಮೊಬೈಲ್ ಸಂಭಾಷಣೆ, ದಾಖಲಾತಿ ವಿಚಾರ ಸಿಡಿಯಲ್ಲಿ ಇರಬಹುದು ಎಂದ ಅವರು, ಸಿಡಿ ಬಹಿರಂಗವಾಗಿ ತೇಜೋವಧೆ ಆದ ನಂತರ ನಾಯಕರ ಗೌರವ ಕಡಿಮೆ ಆಗುತ್ತೆ. ಹೀಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News