ಬಿಬಿಎಂಪಿ ಅಧಿಕಾರಿಗಳಿಗೆ 75 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

Update: 2021-03-07 17:04 GMT

ಬೆಂಗಳೂರು, ಮಾ.7: ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಘನತ್ಯಾಜ್ಯ ನಿರ್ವಹಣಾ ಗುತ್ತಿಗೆ ಬಿಡ್ ಮೌಲ್ಯಮಾಪನ ಮಾಡಲು ವಿಳಂಬ ಮಾಡಿದ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ 75 ಸಾವಿರ ರೂ. ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಪಿ.ಸರಸ್ವತಿ, ಹರ್ಷವರ್ಧನ ರೆಡ್ಡಿ ಮತ್ತು ಎ.ರಮಣ ರೆಡ್ಡಿ ಎಂಬವರು ಸಲ್ಲಿಸಿದ್ದ ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಘನತ್ಯಾಜ್ಯ ನಿರ್ವಹಣಾ ಗುತ್ತಿಗೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ್ದ ಬಿಡ್‍ನ್ನು ಶೀಘ್ರವಾಗಿ ಮೌಲ್ಯಮಾಪನ ಮಾಡುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ 2019ರ ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಬಿಬಿಎಂಪಿಗೆ ನಿರ್ದೇಶಿಸಿತ್ತು. ಆದರೆ ಆದೇಶ ಪಾಲನೆಯಾಗದ ಹಿನ್ನೆಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.

ಕಳೆದ ಜನವರಿಯಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ ಪಾಲಿಕೆ ಅಧಿಕಾರಿಗಳಿಗೆ ದಂಡ ವಿಧಿಸಿದ್ದು, ಈ ಹಣವನ್ನು ಮೂವರು ಅರ್ಜಿದಾರರಿಗೆ ತಲಾ 25 ಸಾವಿರ ರೂ.ನಂತೆ ಒಂದು ತಿಂಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.

ಆದೇಶ ಪಾಲನೆಗೆ ವಿಳಂಬ ಮಾಡಿರುವುದಕ್ಕೆ ಪ್ರಕರಣದ ಆರೋಪಿಗಳಾದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮತ್ತು ಕಾರ್ಯಕಾರಿ ಇಂಜಿನಿಯರ್-1 ವೈ.ಎನ್. ಶೇಷಾದ್ರಿ ಬೇಷರತ್ ಕ್ಷಮೆ ಯಾಚಿಸಿದ ಹಿನ್ನೆಲೆ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News