ಬೌದ್ಧ ಎಂದು ಬರೆಸಿ ಸಮಾಜಕ್ಕೆ ಸಂದೇಶ ಕಳುಹಿಸುವ ಎದೆಗಾರಿಕೆ ನಿಮ್ಮಲ್ಲಿದೆಯೇ: ಶ್ರೀನಿವಾಸ್‌ ಪ್ರಸಾದ್‌ ಪ್ರಶ್ನೆ

Update: 2021-03-07 17:55 GMT

ಚಾಮರಾಜನಗರ: ಜಾತಿ ಜನಗಣತಿ ಸಂದರ್ಭದಲ್ಲಿ ನಾನು ‘ಬೌದ್ಧ’ ಎಂದು ಅಂತ ಬರೆಸಿದೆ. ಆದರೆ ಸಮುದಾಯದ ಇತರೆ ಎಷ್ಟು ಮಂದಿ ಧರ್ಮದ ಕಾಲಂನಲ್ಲಿ ‘ಬುದ್ಧಿಷ್ಟ್‌’ ಅಂತ ಬರೆಸಿದ್ದೀರಿ? ಎಷ್ಟು ಜನ ಕಾರ್ಯರೂಪಕ್ಕೆ ತಂದಿದ್ದೀರಿ. ಬೌದ್ಧ ಎಂದು ಬರೆಸಿ ಸಮಾಜಕ್ಕೆ ಸಂದೇಶ ಕಳುಹಿಸುವ ಎದೆಗಾರಿಕೆ ನಿಮ್ಮಲ್ಲಿದೆಯೇ ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಪ್ರಶ್ನಿಸಿದರು.

ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಭೀಮಮಂದಿರ ಕಟ್ಟಡ ಹಾಗೂ ಅಂಬೇಡ್ಕರ್‌ ಪುತ್ಥಳಿ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊರೋನ ಕಾರಣದಿಂದ ಅನುದಾನ ಬಿಡುಗಡೆಯಾಗಿಲ್ಲ. ಆರ್ಥಿಕ ಪರಿಸ್ಥಿತಿ ಸುಧಾರಿಸಿ ಅನುದಾನ ಬಿಡುಗಡೆಯಾದಾಗ ಗ್ರಾಮದಲ್ಲಿ ಭೀಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುವುದು. ಅಲ್ಲದೇ ಭೀಮಮಂದಿರಕ್ಕಾಗಿ ಇತರೆ ಇಲಾಖೆಯಿಂದ ಅನುದಾನ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ಭೀಮ ಮಂದಿರ ಯಾವ ರೀತಿ ಇರಬೇಕು. ಯಾವ ರೀತಿ ಕಟ್ಟಬೇಕು ಎಂಬ ಯೋಜನೆ ರೂಪಿಸಬೇಕು. ನಮ್ಮಲ್ಲಿ ನಾಯಕರ ಕೊರತೆ ಇಲ್ಲ. ಆದರೆ ಮನಸ್ಸು ಮಾಡಬೇಕು. ಮನಸ್ಸು ಮಾಡಿದರೆ ನಿಮ್ಮ ಕನಸಿನ ಭೀಮ ಮಂದಿರ ನಿರ್ಮಾಣ ಕಷ್ಟವೇನಲ್ಲ. ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸೋಣ ಎಂದು ಸಲಹೆ ನೀಡಿದರು.

ಅಂಬೇಡ್ಕರ್‌ ಅವರು ವಿಶ್ವವಿಜ್ಞಾನಿಯಾಗಿ ಜಗತ್ತಿನಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಜಗತ್ತಿನಲ್ಲಿ ಮೊದಲು ಸಮಾನತೆ ಪ್ರಸ್ತಾಪಿಸಿದ್ದು ಅಬ್ರಹಂ ಲಿಂಕನ್. ನಂತರದ ಸ್ಥಾನ ಅಂಬೇಡ್ಕರ್‌ ಅವರಿಗೆ ಸಲ್ಲಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮೊದಲು ಸಮಾನತೆ ಪ್ರಸ್ತಾಪಿಸಿ, ಪ್ರತಿಪಾದಿಸಿ, ಅದಕ್ಕೆ ಸಂವಿಧಾನದದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದು ಅಂಬೇಡ್ಕರ್‌ ಎಂದು ಅವರು ಬಣ್ಣಿಸಿದರು.

ನಾವು ಯಾವುದೇ ಸಂದರ್ಭದಲ್ಲಿ ಎದೆಗುಂದಬಾರದು ಹಾಗೂ ಹೆದರಬಾರದು. ಎಲ್ಲವನ್ನೂ ಎದುರಿಸುವ ಶಕ್ತಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿದ್ದಾರೆ. ಚಿತ್ರಹಿಂಸೆ, ಬೆಂಕಿಯ ಜ್ವಾಲೆಯಿಂದ ಎದ್ದು ಬಂದ ಅಂಬೇಡ್ಕರ್ ನಿಜವಾದ ಮಹಾನಾಯಕ. ಅವರು ನಮಗೆ ಆದರ್ಶವಾಗಬೇಕು‌. ಅವರ ಹೆಸರಿನಲ್ಲಿ ಮಂದಿರ ಕಟ್ಟಿ ಎಂದು ಹೇಳಿದರು.

ಡಾ.ನಂಜರಾಜು ಹೊಂಗನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಳಂದ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಬೋಧಿದತ್ತ ಮಹಾಥೇರಾ ಸಾನಿಧ್ಯ ವಹಿಸಿದ್ದರು.

ಶಾಸಕ ಎನ್.ಮಹೇಶ್, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು, ಎಸ್.ಜಯಣ್ಣ, ಪೊಲೀಸ್ ಇನ್ ಸ್ಪೆಕ್ಟರ್ ಬಿ.ಪುಟ್ಟಸ್ವಾಮಿ, ತಾಪಂ ಸದಸ್ಯ ಮಹದೇವಯ್ಯ, ಮಾಜಿ ನಗರಸಭಾ ಅಧ್ಯಕ್ಷ ನಂಜುಂಡಸ್ವಾಮಿ,ದಲಿತ ಮುಖಂಡರಾದ ವೆಂಕಟರಮಣಸ್ವಾಮಿ (ಪಾಪು), ಪಿ.ನಂಜಯ್ಯ, ಕಿನಕನಹಳ್ಳಿ ರಾಚಯ್ಯ, ಡಿ.ಎನ್.ನಟರಾಜು, ಗ್ರಾಪಂ ಅಧ್ಯಕ್ಷ ರವಿಕುಮಾರ್, ಸದಸ್ಯರಾದ ಕವಿತಾ ನಟರಾಜು, ನಿರ್ಮಲರಾಮು, ಚಾಮದಾಸಯ್ಯ, ರೂಪ ಮೋಹನ್ ಕುಮಾರ್, ಪದ್ಮ, ರಾಜಮ್ಮ, ಮಣಿಕಂಠಸ್ವಾಮಿ, ಶೈಲಜಾ, ಶಂಕರ ಸಿ., ನಾಗರತ್ಮಮ್ಮ, ಶಿವಣ್ಣೇಗೌಡ, ದಸಂಸ ಜಿಲ್ಲಾ ಸಂಚಾಲಕ ಆಲೂರು ನಾಗೇಂದ್ರ, ಯಜಮಾನರಾದ ಶ್ರೀನಿವಾಸ, ಎಂ.ವೀರಣ್ಣ ಭೀಮಮಂದಿರ ನಿರ್ಮಾಣ ಸಮಿತಿಯ ಸುಗಂಧರಾಜು,ಎಚ್.ಆರ್.ಮಹದೇವಸ್ವಾಮಿ, ನಾಗಯ್ಯ, ಕೆಂಪರಾಜು ಕಾರ್ಯಕ್ರಮದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News