ಮೈಸೂರು ಮೃಗಾಲಯದ ಪ್ರಾಣಿಗಳ ಮೇಲೆ ಪರಿಣಾಮ ಬೀರಿದ 'ಗೋಹತ್ಯೆ ನಿಷೇಧ'

Update: 2021-03-07 18:57 GMT
ಸಾಂದರ್ಭಿಕ ಚಿತ್ರ

ಮೈಸೂರು,ಮಾ.7: ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡ ಹಿನ್ನಲೆಯಲ್ಲಿ ಮೈಸೂರು ಮೃಗಾಲಯದ ಪ್ರಾಣಿಗಳ ಆಹಾರದಲ್ಲಿ ಬದಲಾವಣೆಗೊಂಡು ಅಲ್ಲಿನ ಮಾಂಸಹಾರಿ ಪ್ರಾಣಿಗಳ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗೋಮಾಂಸ ಭಕ್ಷಣೆಯಿಲ್ಲದೆ ಮೃಗಾಲಯದಲ್ಲಿರುವ ಅನೇಕ ಮಾಂಸಹಾರಿ ಪ್ರಾಣಿಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಗೋಮಾಂಸ ಇಲ್ಲದೆ ಕೋಳಿ ಮಾಂಸಕ್ಕೆ ಹೊಂದಿಕೊಳ್ಳುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಕಾಡಿನಲ್ಲಿ ವಾಸ ಮಾಡುವ ಅನೇಕ ಪ್ರಾಣಿಗಳು ಮೃಗಾಲಯದಲ್ಲಿದ್ದು ಇವುಗಳ ಜೊತೆಗೆ ಹಲವು ಬಗೆಯ ವಿದೇಶಿ ಕಾಡು ಪ್ರಾಣಿಗಳು ಸಹ ಇವೆ. ಅವುಗಳಿಗೆ ಹಲವಾರು ವರ್ಷಗಳಿಂದ ಗೋಮಾಂಸ ನೀಡಲಾಗುತ್ತಿತ್ತು. ತಕ್ಷಣ ಇದನ್ನು ಸ್ಥಗಿತಗೊಳಿಸಿರುವುದರಿಂದ ಅಲ್ಲಿನ ಪ್ರಾಣಿಗಳಿಗೆ ನೀಡುತ್ತಿರುವ ಆಹಾರ ಅಷ್ಟಾಗಿ ಒಗ್ಗುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವ ಮುನ್ನ ಅದರ ಸಾಧಕ ಬಾಧಕಗಳನ್ನು ಚಿಂತಿಸದೆ ಏಕಾಏಕಿ ನಿಷೇಧ ಮಾಡಿದ ಪರಿಣಾಮ ಮೃಗಾಲಯದ ಪ್ರಾಣಿಗಳ ಮೇಲೆ ಬಹು ದೊಡ್ಡ ಪರಿಣಾಮವುಂಟು ಮಾಡಿದೆ ಎನ್ನುವ ಅಭಿಪ್ರಾಯ ವನ್ಯಜೀವಿ ತಜ್ಞರದ್ದಾಗಿದೆ. 

ಅವರ ಪ್ರಕಾರ ರಾಜ್ಯ ಸರ್ಕಾರವೇನೊ ಗೋಹತ್ಯೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿತು. ಆದರೆ ಅದರಿಂದಾಗುವ ಅನಾನುಕೂಲದ ಯೋಚನೆಯನ್ನು ಮಾಡಲಿಲ್ಲ. ಹಾಗಾಗಿ ಮೃಗಾಲಯದಲ್ಲಿನ ಪ್ರಾಣಿಗಳಿಗೆ ಗೋಮಾಂಸ ನೀಡುವುದನ್ನು ನಿಲ್ಲಿಸಲಾಗಿದ್ದು, ಇದರಿಂದಾಗಿ ಮಾಂಸಹಾರಿ ಪ್ರಾಣಿಗಳಲ್ಲಿ ಪ್ರೋಟಿನ್, ಕ್ಯಾಲ್ಶಿಯಂ, ಕಾರ್ಬನ್ ಮತ್ತು ಕೊಬ್ಬಿನಂಶ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಕಾಡಿನಲ್ಲಿ ವಾಸಿಸುವ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ನರಿ, ತೋಳ, ಕತ್ತೆಕಿರುಬ ಸೇರಿದಂತೆ ಇತರೆ ಮಾಂಸಹಾರಿಗಳು ತಮಗೆ ಬೇಕಾದ ಸಣ್ಣ ಪ್ರಾಣಿಗಳಿಂದ ಹಿಡಿದು ದೊಡ್ಡ ಪ್ರಾಣಿಗಳವರೆಗೂ ಭೇಟೆಯಾಡಿ ಆಹಾರವನ್ನು ಉತ್ಪತ್ತಿ ಮಾಡಿಕೊಳ್ಳುತ್ತವೆ. ಇದರಿಂದ ಅವುಗಳಿಗೆ ಬೇಕಾಗುವ ಕ್ಯಾಲ್ಶಿಯಂ, ಪ್ರೋಟಿನ್, ವೃದ್ಧಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿ ಅವುಗಳು ಸದಾ ಲವಲವಿಕೆಯಿಂದಿರಲು ಸಾಧ್ಯವಾಗುತ್ತವೆ ಎಂಬುವುದು ವನ್ಯಜೀವಿ ತಜ್ಞ ಅಭಿಪ್ರಾಯ.

ಮಾಂಸಹಾರಿ ಪ್ರಾಣಿಗಳಿಗೆ ಕೋಳಿ ಮಾಂಸ ಅಷ್ಟಾಗಿ ಒಗ್ಗುವುದಿಲ್ಲ. ಅದರಲ್ಲಿ ಅಷ್ಟಾಗಿ ಪ್ರೋಟಿನ್, ಕ್ಯಾಲ್ಶಿಯಂ ಅಂಶ ಇರುವುದಿಲ್ಲ. ಇನ್ನು ಅದನ್ನು ಮಾಂಸಹಾರಿ ಪ್ರಾಣಿಗಳು ಸೇವಿಸಿದರೆ ಅಷ್ಟಾಗಿ ತೃಪ್ತಿಹೊಂದುವುದಿಲ್ಲ. ಹಾಗಾಗಿ ಅವುಗಳ ದೈಹಿಕ ಮತ್ತು ಮಾನಸಿಕ ರೋಗಕ್ಕೆ ಕಾರಣವಾಗಬಹುದು. ಮೃಗಾಲಯಗಳಲ್ಲಿ ಜಿಂಕೆ, ಕಡವೆ ಮಾಂಸ ನೀಡಲು ಆಗುವುದಿಲ್ಲ ಎಂದೇ ಪರ್ಯಾಯವಾಗಿ ಗೋಮಾಂಸ ನೀಡಲಾಗುತ್ತಿತ್ತು. ಗೋಮಾಂಸ ಆದರೆ ಅದರ ಮೂಳೆಗಳು ಗಟ್ಟಿಯಾಗಿರುತ್ತದೆ. ಜೊತೆಗೆ ಮಾಂಸ ಕೂಡ ಕಾಡಿನಲ್ಲಿ ತಿನ್ನುವ ಆಹಾರದ ಸಾಮ್ಯತೆಯನ್ನು ಹೊಂದಿರುತ್ತದೆ. ಗೋಮಾಂಸ ಹೆಚ್ಚಿನ ಪ್ರೋಟಿನ್, ವಿಟಮಿನ್ ಹೊಂದಿರುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ವನ್ಯಜೀವಿ ತಜ್ಞರೊಬ್ಬರು ತಿಳಿಸಿದ್ದಾರೆ.

ಮೃಗಾಲಯದಲ್ಲಿ ಕೋಳಿ ಮಾಂಸದ ಜೊತೆಗೆ ಆಡು, ಕುರಿ ಮಾಂಸ ನೀಡಿದರೆ ಮಾಂಸಹಾರಿ ಪ್ರಾಣಿಗಳು ಲವಲವಿಕೆಯಿಂದ ಇರಬಹುದು. ಈಗ ನೀಡುತ್ತಿರುವ ಆಹಾರದಿಂದ ಪ್ರಾಣಿಗಳ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸಲು ಈಗಲೇ ಆಗುವುದಿಲ್ಲ, ಸ್ವಲ್ಪ ದಿನ ಕಾದು ನೋಡಬೇಕು ಎಂದು ತಿಳಿಸಿದರು.

ಲವಲವಿಕೆಯಿಂದ ಇರುತ್ತಿದ್ದ ಮೃಗಾಲಯದ ಪ್ರಾಣಿಗಳು ಇದೀಗ ಸಮರ್ಪಕ ಆಹಾರ ದೊರಕದೆ ಮಂಕಾಗಿವೆ ಎಂದು ಹೇಳಲಾಗುತ್ತಿದ್ದು, ಮೃಗಾಲಯದಲ್ಲಿನ ಹುಲಿ, ಸಿಂಹ, ಚಿರತೆ, ನರಿ, ತೋಳ, ಕತ್ತೆ ಕಿರುಬ ಸೇರಿದಂತೆ ವಿದೇಶಿ ಪ್ರಾಣಿಗಳಾದ ಸಿಂಹ, ಕಾಂಗರೊ, ಜಾಗ್ವಾರ್ ಮಾಂಸಹಾರಿ ಪ್ರಾಣಿಗಳು ಹೆಚ್ಚು ಉತ್ಸಾಹದಿಂದ ಇಲ್ಲದೆ ಸ್ವಲ್ಪ ಮಟ್ಟಿಗೆ ಸೊರಗಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. 

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಕುಲಕರ್ಣಿ, ಯಾವುದೇ ಪ್ರಾಣಿಗಳು ಲವಲವಿಕೆಯಿಂದ ಇಲ್ಲ ಎಂಬುದು ಸುಳ್ಳು. ಆಹಾರ ಸೇವಿಸಿರುವುದರಿಂದ ಮಧ್ಯಾಹ್ನದ ಹೊತ್ತು ಪ್ರಾಣಿಗಳು ಮಲಗಿರುತ್ತವೆ. ಉಳಿದ ಸಮಯದಲ್ಲಿ ಸಹಜವಾಗಿ ಓಡಾಡುತ್ತವೆ. ಮಾಂಸಹಾರಿ ಪ್ರಾಣಿಗಳಿಗೆ ಸಹಜ ಆಹಾರ ದೊರಕಲಿ ಎಂಬ ಉದ್ದೇಶದಿಂದ ಮೃಗಾಲಯಕ್ಕೆ ಮಾತ್ರ ಗೋಹತ್ಯೆ ನಿಷೇಧದ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸದ್ಯ ಕೋಳಿ ಮಾಂಸ ನೀಡುತ್ತಿರುವುದರಿಂದ ಪ್ರಾಣಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈಗಾಗಲೇ ಕೋವಿಡ್ ಸಂದರ್ಭದಲ್ಲಿ ಭನ್ನೇರುಘಟ್ಟ ಮೃಗಾಲಯದಲ್ಲಿ ಮೂರು ತಿಂಗಳು ಕೋಳಿ ಮಾಂಸವನ್ನೇ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆಡು, ಕುರಿ ಮಾಂಸ ನೀಡಬೇಕಂದರೆ ಒಂದು ಕೆ.ಜಿ.ಗೆ 700 ರೂ ನೀಡಬೇಕು, ಕೋವಿಡ್ ಬಂದ ಕಾರಣ ಮೃಗಾಲಯಕ್ಕೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಮೃಗಾಲಯ ನಡೆಸುವುದೇ ಕಷ್ಟವಾಗಿದೆ. ಅಂತಹದರಲ್ಲಿ ಅಷ್ಟೊಂದು ಹಣ ವ್ಯಯಿಸಿ ಮಾಂಸ ನೀಡಲು ಆಗುವುದಿಲ್ಲ, ಹಾಗಾಗಿ ಕೋಳಿ ಮಾಂಸ ನೀಡಲಾಗುತ್ತಿದೆ. ಇದರಿಂದ ಪ್ರಾಣಿಗಳ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ.

-ಎಲ್.ಆರ್.ಮಹದೇವಸ್ವಾಮಿ, ಅಧ್ಯಕ್ಷರು, ಮೃಗಾಲಯ ಪ್ರಾಧಿಕಾರ, ಮೈಸೂರು

ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಸಾವಿರ ರೂ. ಆದರೂ ಅವುಗಳಿಗೆ ಬೇಕಾದ ಮಾಂಸವನ್ನು ನೀಡಬೇಕು. ದಾನಿಗಳು ಮತ್ತು ಸಾರ್ವಜನಿಕರಿಂದ ಪ್ರಾಣಿಗಳಿಗಾಗಿ ಐದು ರೂ. ಪಡೆದರೂ ಲಕ್ಷಾಂತರ ರೂ.ಗಳು ಬರುತ್ತವೆ. ಪ್ರಾಣಿಗಳ ರಕ್ಷಣೆಗೆ ಹಣ ನೀಡಲು ಯಾರೂ ಹಿಂದೂ ಮುಂದು ನೋಡುವುದಿಲ್ಲ, ಅಲ್ಲಿನ ಅಧಿಕಾರಿಗಳಿಗ ಇಚ್ಚಾಶಕ್ತಿ ಬೇಕು.
- ಹೆಸರು ಹೇಳಲಿಚ್ಚಿಸದ ವನ್ಯಜೀವಿ ತಜ್ಞ

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News