ಸಮ ಸಮಾಜ ನಿರ್ಮಾಣವಾಗಬೇಕಾದರೆ ಜಾತಿ ವ್ಯವಸ್ಥೆ ಹೋಗಬೇಕು: ಸಿದ್ದರಾಮಯ್ಯ

Update: 2021-03-07 19:12 GMT

ತುಮಕೂರು, ಮಾ.8: ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಸಮ ಸಮಾಜ ನಿರ್ಮಾಣವಾಗಬೇಕಾದರೆ ಜಾತಿವ್ಯವಸ್ಥೆ ಹೋಗಲೇಬೇಕು. ಜಾತಿ ಹೋಗದೆ ಒಳ್ಳೆಯ ಸರ್ಕಾರವನ್ನು ನೋಡಲು ಮತ್ತು ಭ್ರಷ್ಟಾಚಾರ ರಹಿತ ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ತುಮಕೂರು ನಗರದ ಬಾಲಭವನದಲ್ಲಿಂದು ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ವತಿಯಿಂದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್, ಲೇಖಕಿ ಕೆ.ನೀಲಾ ಅವರಿಗೆ ದರೈಸ್ತ್ರೀ ಪ್ರಶಸ್ತಿ ಮತ್ತು ಕವಿ ವಿಲ್ಸನ್ ಕಟೀಲ್ ಅವರಿಗೆ ಕೆ.ಬಿ.ಕಾವ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾವಿರಾರು ವರ್ಷಗಳಿಂದಲೂ ಹೋರಾಟ ನಡೆಯುತ್ತಲೇ ಬರುತ್ತಿದೆ. ಆದರೂ ಜಾತಿ ಯಾಕೆ ಹೋಗುತ್ತಿಲ್ಲ ಎಂದರೆ ನಮ್ಮ ಸಾಮಾಜಿಕ ವ್ಯವಸ್ಥೆ ಚಲನೆ ರಹಿತವಾಗಿದೆ. ಚಲನೆಯಿಲ್ಲದ ಸಾಮಾಜಿಕ ವ್ಯವಸ್ಥೆ ಬದಲಾವಣೆಯಾಗುವುದಿಲ್ಲ. ಬದಲಾವಣೆಯಾಗದೆ ಜಾತಿ ಹೋಗುವುದಿಲ್ಲ. ಅದನ್ನು ಅಲುಗಾಡಿಸಬೇಕಾದರೆ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ತೀವ್ರಗತಿಯಲ್ಲಿ ಆಗಬೇಕು ಎಂದು ಪ್ರತಿಪಾದಿಸಿದರು.

ನಮ್ಮ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಜಾತಿ ಹೋಗಲಾಡಿಸಲು ಮತ್ತು ಸಮಸಮಾಜ ನಿರ್ಮಾಣಕ್ಕೆ ಹಲವು ಸಮಾಜ ಸುಧಾರಕರು ಪ್ರಯತ್ನಪಟ್ಟಿದ್ದರೂ ಆರಂಭದಲ್ಲಿ ಜಾತಿ ಹೋದಂತೆ ಕಂಡುಬಂದರೂ ಮತ್ತೆ ಅದು ಗಟ್ಟಿಯಾಗುತ್ತಲೇ ಹೋಗುತ್ತದೆ. ಅದು ಬಾವಿಯ ನೀರಿನಲ್ಲಿ ತುಂಬಿಕೊಂಡಿರುವ ಕಸವನ್ನು ಬಿಂದಿಗೆ ಮೂಲಕ ಸರಿಸಿದರೆ ಮತ್ತೆ ಆ ಕಸ ಬಂದು ಸೇರುವಂತೆ ಜಾತಿ ವ್ಯವಸ್ಥೆಯೂ ಗಟ್ಟಿಯಾಗುತ್ತದೆ ಎಂದರು. 

ನಮ್ಮ ಜಾತಿಯ ಅಧಿಕಾರಿ ಭ್ರಷ್ಟನಾದರೂ ರಕ್ಷಣೆ ಮಾಡುತ್ತೇವೆ. ಅವನಿಗೆ ಉನ್ನತ ಸ್ಥಾನವನ್ನೂ ನೀಡುತ್ತೇವೆ. ಜೊತೆಗೆ, ಭ್ರಷ್ಟತೆ ಹೋಗಬೇಕು, ಬದಲಾವಣೆ ಬರಬೇಕು ಎಂದರೆ ಹೇಗೆ ಸಾಧ್ಯ. ಭ್ರಷ್ಟಾಚಾರ ರಹಿತ ಸರ್ಕಾರ ಕೊಡಲು ಜಾತಿ ವ್ಯವಸ್ಥೆ ಹೋಗಬೇಕು. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಬಂದಾಗ ಮಾತ್ರ ಭ್ರಷ್ಟಾಚಾರ ಮತ್ತು ಜಾತಿ ತಾನಾಗೇ ನಾಶವಾಗುತ್ತದೆ ಎಂದು ತಿಳಿಸಿದರು.

ಕೆ.ಬಿ.ಸಿದ್ದಯ್ಯ ಒಳಮೀಸಲಾತಿ ಕುರಿತು ಚರ್ಚಿಸಿದರು. ಆಗ ಚುನಾವಣೆ ಹತ್ತಿರ ಬಂದಿತ್ತು. ಆ ಕಾರಣಕ್ಕಾಗಿ ಆಮೇಲೆ ನೋಡೋಣ ಎಂದು ಹೇಳಿದೆ. ಇದಕ್ಕೆ ಕೆ.ಬಿ. ಅಸಮಾಧಾನಗೊಂಡರು. ನಂತರ ಅವರನ್ನು ಸಮಾಧಾನಪಡಿಸಿದೆ ಎಂದ ಅವರು ಅಧಿಕಾರದಲ್ಲಿ ಇರುವವರನ್ನು ಹೊಗಳುವವರೇ ಹೆಚ್ಚು. ಆದರೆ ಕೆ.ಬಿ.ಸಿದ್ದಯ್ಯ ಎಂದೂ ಆ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಇದ್ದದ್ದನ್ನು ಇದ್ದ ಹಾಗೆಯೇ ಹೇಳುತ್ತಿದ್ದರು. ಜಾತಿ ವ್ಯವಸ್ಥೆ ಹೋಗಲಾಡಿಸಲು ಪ್ರಯತ್ನಿಸಬೇಕು. ಸಾಮಾಜಿಕ ನ್ಯಾಯ ಸಿಗಬೇಕು ಎಂದು ಸಿದ್ದಯ್ಯ ಚರ್ಚಿಸುತ್ತಿದ್ದರು ಎಂದು ಹೇಳಿದರು. 

ದರೈಸ್ತ್ರೀ ಪ್ರಶಸ್ತಿ ಸ್ವೀಕರಿಸಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ಲೇಖಕಿ ಕೆ.ನೀಲಾ, ವಿಲ್ಸನ್ ಕಟೀಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತು ಪಿ.ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ ಮಾತನಾಡಿದರು.

ವೇದಿಕೆಯಲ್ಲಿ ಕುಂದೂರು ತಿಮ್ಮಯ್ಯ, ರೈತ ಮುಖಂಡ ಎನ್.ಜಿ.ರಾಮಚಂದ್ರ, ಉಪನ್ಯಾಸಕ ರಾಮಚಂದ್ರಪ್ಪ ಇದ್ದರು. ಯುವ ಮುಖಂಡ ಕೊಟ್ಟಶಂಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿವಣ್ಣ ತಿಮ್ಲಾಪುರ ಪ್ರಾಸ್ತಾವಿಕ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News