ರಾಜ್ಯ ಬಜೆಟ್ ಮಂಡನೆ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಧರಣಿ: ಧಿಕ್ಕಾರ ಕೂಗಿ ಸದನದಿಂದ ಹೊರನಡೆದ ಸದಸ್ಯರು

Update: 2021-03-08 17:11 GMT

ಬೆಂಗಳೂರು, ಮಾ. 8: ‘ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನೈತಿಕತೆ ಕಳೆದುಕೊಂಡಿದೆ. ಹೀಗಾಗಿ ಅವರಿಗೆ ಬಜೆಟ್ ಮಂಡಿಸುವ ಅಧಿಕಾರವೇ ಇಲ್ಲ' ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಕಪ್ಪುಪಟ್ಟಿ ಧರಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದಲ್ಲದೆ, ಬಜೆಟ್ ಭಾಷಣ ಧಿಕ್ಕರಿಸಿ ಸಭಾತ್ಯಾಗ ಮಾಡಿದರು.

ಸೋಮವಾರ ವಿಧಾನಸಭೆ ಕಲಾಪ ನಿಗದಿಯಂತೆ ಮಧ್ಯಾಹ್ನ 12:05ಕ್ಕೆ ಸರಿಯಾಗಿ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಲ್ಲ ಸದಸ್ಯರಿಗೂ ಮಾರ್ಚ್ 8ರ ಮಹಿಳಾ ದಿನಾಚರಣೆ ಶುಭ ಕೋರಿದರು. ಬಳಿಕ ಬಜೆಟ್ ಮಂಡನೆಗೆ ಅವಕಾಶ ನೀಡಿದರು. ಆಯವ್ಯಯ ಭಾಷಣ ಮಾಡಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗುತ್ತಿದ್ದಂತೆ ಎದ್ದುನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ, ಏರಿದ ಧ್ವನಿಯಲ್ಲಿ ‘ಈ ಸರಕಾರಕ್ಕೆ ನೈತಿಕತೆಯೇ ಇಲ್ಲ' ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಇರುವುದು ಅನೈತಿಕತೆ ಮೂಟೆ ಹೊತ್ತಿರುವ ಸರಕಾರ. ಇವರ ಅಕ್ರಮ, ಅನೈತಿಕತೆಯನ್ನು ಪ್ರತಿಭಟಿಸಿ ಬಜೆಟ್ ಭಾಷಣದ ವೇಳೆ ಪ್ರತಿಪಕ್ಷ ಸಭಾತ್ಯಾಗ ಮಾಡಲಿದೆ. ಇಂತಹವರಿಗೆ ರಾಜ್ಯದ ಜನತೆಯ ತೆರಿಗೆಯಿಂದ ಬಂದಿರುವ ಒಟ್ಟು 2.50ಲಕ್ಷ ಕೋಟಿ ರೂ.ಗಳಷ್ಟು ಹಣವನ್ನು ನೀಡಲು ಸಾಧ್ಯವೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿ ನೇತೃತ್ವದ ಅನೈತಿಕ ಸರಕಾರ ಮಂಡಿಸುತ್ತಿರುವ ಬಜೆಟ್ ಭಾಷಣವನ್ನು ವಿರೋಧಿಸಿ ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಪ್ರಕಟಿಸಿದ ಸಿದ್ದರಾಮಯ್ಯ ಸದನ ಕಲಾಪದಿಂದ ಹೊರ ನಡೆದರು. ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು ‘ನೈತಿಕತೆ ಕಳೆದುಕೊಂಡಿರುವ ಬಿಜೆಪಿ ಸರಕಾರಕ್ಕೆ ಧಿಕ್ಕಾರ' ಎಂದು ಘೋಷಣೆ ಸಿದ್ದರಾಮಯ್ಯನವರನ್ನು ಅನುಸರಿಸಿ ಸಭಾತ್ಯಾಗ ಮಾಡಿದರು.

ಜಾಮೀನಿನ ಮೇಲಿದ್ದಾರೆ: ‘ವಸತಿ ಯೋಜನೆಗೆ ಮಂಜೂರಾದ 26 ಎಕರೆ ಅವ್ಯವಹಾರದ ಬಗ್ಗೆ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಮತ್ತು ಸಚಿವ ಮುರುಗೇಶ ನಿರಾಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ರದ್ದು ಮಾಡದ ಹೈಕೋರ್ಟ್ ವಿಚಾರಣೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿ ಅವರಿಗೆ ಬಂಧನದಿಂದ ರಕ್ಷಣೆ ಸಿಕ್ಕಿದ್ದು ಜಾಮೀನಿನ ಮೇಲೆ ಇದ್ದಾರೆ' ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಅಲ್ಲದೆ, ‘ತಮ್ಮ ವಿರುದ್ಧ ಆಕ್ಷೇಪಾರ್ಹ ಸುದ್ದಿ ಪ್ರಸಾರ ಮಾಡದಂತೆ ಆರು ಸಚಿವರು ನ್ಯಾಯಾಲಯಕ್ಕೆ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇನ್ನೂ ಕೆಲ ಸಚಿವರು ಕೋರ್ಟ್ ಹೋಗಲಿದ್ದಾರೆಂದು ಅವರೇ ಹೇಳಿಕೊಳ್ಳುತ್ತಿದ್ದಾರೆ. ಹಾಗಿದ್ದರೆ, ತಪ್ಪಾಗಿದೆ ಎಂದು ಅರ್ಥವಲ್ಲವೇ? ಹೀಗಾಗಿಯೇ ಈ ಸರಕಾರಕ್ಕೆ ನೈತಿಕತೆ ಇಲ್ಲ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News