ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರು ಶರಾವತಿ ಮುಳುಗಡೆ ಸಂತ್ರಸ್ತರಿಂದ ಧರಣಿ

Update: 2021-03-08 12:29 GMT

ಶಿವಮೊಗ್ಗ, ಮಾ.8: ತಾವು ಸಾಗುವಳಿ ಮಾಡುತ್ತಿರುವ ಜಮೀನಿಗೆ ಪೋಡಿ ಮಾಡಿಕೊಡಬೇಕೆಂದು ಆಗ್ರಹಿಸಿ ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬವೊಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿತು.

ಸೀತಾರಾಮ್, ಲಲಿತಮ್ಮ ಎಂಬುವವರು ಧರಣಿಯಲ್ಲಿ ಭಾಗವಹಿಸಿ ತಾವು ಶರಾವತಿ ಮುಳುಗಡೆ ಸಂತ್ರಸ್ತರಾಗಿದ್ದು, ಈ ಹಿಂದೆ ಎರೆಹಳ್ಳಿ ಗ್ರಾಮದಲ್ಲಿ ಜಮೀನು ನೀಡಲಾಗಿತ್ತು. ಆದರೆ ಆ ಜಮೀನಿಗೆ ಸಾಗುವಳಿ ಚೀಟಿ ಕೊಡಲಿಲ್ಲ. ಅಲ್ಲಿಂದ ಭದ್ರಾವತಿ ತಾಲೂಕು ಎಮ್ಮೆದೊಡ್ಡಿ ಗ್ರಾಮದ ಸರ್ವೇ ನಂ.8 ರಲ್ಲಿ ಜಮೀನು ನೀಡಲಾಯಿತು. ಆದರೆ ಅದು ಕೂಡ ಅರಣ್ಯ ಇಲಾಖೆ ನಮ್ಮದು ಎಂದು ಹೇಳುತ್ತಿದೆ. ಹಾಗಾಗಿ ನಾವೀಗ ಬೀದಿ ಪಾಲಾಗಿದ್ದೇವೆ ಎಂದು ಆರೋಪಿಸಿದರು.

ಹಾಗಾಗಿ ಎರೆಹಳ್ಳಿಯಲ್ಲಿ ನೀಡಿರುವ 3 ಎಕರೆ ಜಮೀನನ್ನು ನಮಗೆ ಬಿಟ್ಟುಕೊಡಲಿ. ಅದು ಸಾಧ್ಯವಾಗದಿದ್ದರೆ ಎಮ್ಮೆದೊಡ್ಡಿ ಗ್ರಾಮದಲ್ಲಿ ನೀಡಿರುವ ಜಮೀನನ್ನಾದರೂ ಕೊಡಲಿ. ಒಟ್ಟಿನಲ್ಲಿ ಸಂತ್ರಸ್ತರಾದ ನಮಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ನಮ್ಮ ಹೆಸರಿಗೆ ಜಮೀನು ಪೋಡಿಯಾಗಿಲ್ಲ. ಇನ್ನಾದರೂ ಜಮೀನು ಪೋಡಿ ಮಾಡಲಿ. ಇಲ್ಲದಿದ್ದರೆ ನಮ್ಮ ಕುಟುಂಬದವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದವರಾದ ಸೀತಾರಾಮ್, ಲಲಿತಮ್ಮ, ಮಹೇಶ್ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News