ಕೊಡಗಿನಲ್ಲಿ ಮುಂದುವರಿದ ಹುಲಿ ದಾಳಿ, ಹೆಚ್ಚಿದ ಆತಂಕ: ಸೆರೆ ಸಿಗದಿದ್ದರೆ ಗುಂಡಿಕ್ಕಲು ಆದೇಶ

Update: 2021-03-08 12:53 GMT

ಮಡಿಕೇರಿ, ಮಾ.8: ದಕ್ಷಿಣ ಕೊಡಗಿನ ಕುಮಟೂರು, ಬೆಳ್ಳೂರು ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ 3 ಮಾನವ ಜೀವ ಬಲಿ ಪಡೆದಿರುವ ಹುಲಿಯ ಸೆರೆ ಅಥವಾ ಕಡೆಯ ಪ್ರಯತ್ನದ ಭಾಗವಾಗಿ ಗುಂಡಿಕ್ಕುವಂತೆ ಆದೇಶಿಸಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಸುತ್ತೋಲೆ ಹೊರಡಿಸಿದ್ದಾರೆ.

ಈ ಬಗ್ಗೆ ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಮಾತ್ರವಲ್ಲದೇ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನೈಪುಣ್ಯತೆ ಹೊಂದಿರುವ ಬೆಂಗಳೂರಿನ ಜಿ.ಸುನೀಲ್ ಎಂಬವರನ್ನು ಕೂಡ ಕೊಡಗು ಜಿಲ್ಲೆಯಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ. 

ಆದೇಶ ಸಾರಾಂಶ
ಈ ಹಿಂದೆ ಟಿ.ಶೆಟ್ಟಿಗೇರಿ, ಕುಮಟೂರು ಗ್ರಾಮಗಳಲ್ಲಿ ಹುಲಿ ದಾಳಿಗೆ ಇಬ್ಬರು ಮೃತಪಟ್ಟಿದ್ದರು. ಆ ಸಂದರ್ಭ ಹುಲಿಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಕೊಡಗು ಸಿಸಿಎಫ್ ಅವರು ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಹುಲಿ ಸೆರೆಗೆ ಅನುಮತಿ ಕೋರಿದ್ದರು. ಈ ಮನವಿ ಆಧಾರದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲು ಅನುಮತಿ ನೀಡಿಲಾಗಿತ್ತು. ತದನಂತರ ಮಾ.8ರ ಬೆಳಗೆ ಮತ್ತೆ ಹುಲಿ ದಾಳಿ ನಡೆಸಿ ಜೀವ ಬಲಿ ಪಡೆದಿರುವ ಹಿನ್ನಲೆಯಲ್ಲಿ ಹುಲಿ ಸೆರೆಗೆ ನಿಪುಣ ವ್ಯಕ್ತಿಯನ್ನು ನಿಯೋಜಿಸಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ. 

ಮಾನವ ಜೀವ ಹಾನಿಗೆ ಕಾರಣವಾಗಿರುವ ಹುಲಿಯನ್ನು ಇಲಾಖೆ ವತಿಯಿಂದ ನಿರ್ದಿಷ್ಟವಾಗಿ ಗುರುತಿಸಿ ಬಳಿಕ ಸೆರೆ ಹಿಡಿಯಬೇಕು. ಸೆರೆ ಹಿಡಿಯಲು ಅಸಾಧ್ಯವಾದಲ್ಲಿ ಮಾತ್ರವೇ ಹುಲಿಗೆ ಗುಂಡಿಕ್ಕಲು ಸೂಚನೆ ನೀಡಲಾಗಿದೆ. ಗುಂಡಿಕ್ಕುವುದನ್ನು ಕೊನೆಯ ಪ್ರಕ್ರಿಯೆಯಾಗಿ ಪರಿಗಣಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದ್ದು, ಕೇಂದ್ರ ಸರಕಾರದ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಸೆಕ್ಷನ್ ಅಡಿಯಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಿಸಿಸಿಎಫ್ ಅವರು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಹುಲಿಯ ಚಹರೆ
ಪೊನ್ನಂಪೇಟೆ ಹೋಬಳಿಯಲ್ಲಿ ಮಾನವರ ಜೀವ ಬಲಿಗೆ ಕಾರಣವಾಗಿರುವ ಹುಲಿಯನ್ನು 2013ರಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿದ್ದ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿತ್ತು. ಆ ಸಂದರ್ಭ ಈ ಹುಲಿಯನ್ನು ‘ನಾಗರಹೊಳೆ-13ಯು285’ ಎಂದು ಗುರುತಿಸಲಾಗಿತ್ತು. ಇದೇ ಹುಲಿ ಶ್ರೀಮಂಗಲ, ಟಿ.ಶೆಟ್ಟಿಗೇರಿ, ಕುಮಟೂರು ಗ್ರಾಮಗಳಲ್ಲಿ ತಿರುಗಾಡುತ್ತಿದ್ದು, ಮಾನವರ ಜೀವ ಬಲಿಗೆ ಕಾರಣವಾಗಿದೆ ಎಂದು ಬಲವಾಗಿ ನಂಬಲಾಗಿದೆ. ಅದರ ಸೆರೆಗೆ ಕಳೆದ 16 ದಿನಗಳಿಂದ ಸಾಕಾನೆ, ಬಂಡೀಪುರದ ಶ್ವಾನ ರಾಣಾ ಸಹಿತ 150ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಸ್ಫೋಟ, ರಸ್ತೆ ತಡೆ ಪ್ರತಿಭಟನೆ
ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ತೋಟದ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಹುಲಿ ದಾಳಿ ಮಾಡಿ ಬಾಲಕನೋರ್ವ ಬಲಿಯಾಗಿರುವ ಘಟನೆಯನ್ನು ಖಂಡಿಸಿ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ಹುಲಿ ಸೆರೆ ಕಾರ್ಯಾಚರಣೆಗಾಗಿ ಸಾಕಾನೆಯನ್ನು ಹೊತ್ತು ತಂದ ಅರಣ್ಯ ಇಲಾಖೆಯ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಹುಲಿಯನ್ನು ಹಿಡಿಯಲು ನಮಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು.

ಕಳೆದ ಎರಡು ವಾರಗಳಲ್ಲಿ ಅಮಾಯಕ ಮೂರು ಜೀವಗಳು, ಹತ್ತಾರು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಆದರೂ ಸರ್ಕಾರ ಮತ್ತು ಅರಣ್ಯ ಸಚಿವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ವಿಫಲವಾಗಿದೆ, ಕೇವಲ ಸಾಕಾನೆಗಳ ಮೆರವಣಿಗೆ ಮಾಡುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಹುಲಿ ಹಿಡಿಯಲು ಅವಕಾಶ ನೀಡಿದರೆ ಕೇವಲ ಮೂರು ದಿನಗಳಲ್ಲಿ ಹುಲಿಯನ್ನು ಬಂಧಿಸಿ ಅರಣ್ಯ ಇಲಾಖೆಗೆ ಒಪ್ಪಿಸುವುದಾಗಿ ಸವಾಲು ಹಾಕಿದರು.

ಅರಣ್ಯ ಸಚಿವರು ಸ್ಥಳಕ್ಕೆ ಬಾರದೆ ರಸ್ತೆ ತಡೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿದವು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕೊಡಗು ವೃತ್ತದ ಅರಣ್ಯ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News