ಅಶ್ಲೀಲ ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ, ಎಚ್‍ಡಿಕೆ, ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು

Update: 2021-03-08 14:22 GMT

ಬೆಂಗಳೂರು, ಮಾ.8: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ತುಮಕೂರು ಮೂಲದ ವಕೀಲ ಬ್ರಹ್ಮಾನಂದ ರೆಡ್ಡಿ ಎಂಬವರು ದೂರು ಸಲ್ಲಿಕೆ ಮಾಡಿದ್ದು, ದಿನೇಶ್ ಕಲ್ಲಹಳ್ಳಿ ಅವರು ನೀಡಿರುವ ಸಿಡಿ ಕುರಿತು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ವಿಚಾರಣೆ ವೇಳೆ ಸಹ ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಾಗಾಗಿ, ಮೊದಲು ದಿನೇಶ್ ಕಲ್ಲಹಳ್ಳಿ ನಡೆ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡೀಲ್ ಆಗಿದೆ ಎಂದಿದ್ದಾರೆ. ಈ ಬಗ್ಗೆ ಎಲ್ಲ ಮಾಹಿತಿ ಇದ್ದು, ಪೊಲೀಸರಿಗೆ ತಿಳಿಸದೇ ಇರುವುದರಿಂದ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ರಾಜಕೀಯ ಜಿದ್ದಾಜಿದ್ದಿ ನಡೆದಿತ್ತು. ದೊಡ್ಡ ಮಟ್ಟದ ಷಡ್ಯಂತ್ರದಿಂದ ಚಿತ್ರೀಕರಣ ಮಾಡಿರಬಹುದು ಎಂಬ ಗುಮಾನಿ ಇರುವುದರಿಂದ ವಿಚಾರಣೆ ಮಾಡಬೇಕು. ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ಅವರು ಒತ್ತಾಯ ಮಾಡಿದ್ದಾರೆ.

ದುಬೈನಲ್ಲಿ ಮಹಿಳೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಆಕೆ ಬದುಕಿದ್ದಾಳಾ, ಇಲ್ಲವಾ? ಎಂದು ಗೊತ್ತಾಗುತ್ತಿಲ್ಲ. ಆಕೆಯ ಬಗ್ಗೆ ತನಿಖೆ ಮಾಡಬೇಕು. ಆಕೆಯ ಕುರಿತೂ ವಿಚಾರಣೆ ಮಾಡಬೇಕು. ಈ ವಿಡಿಯೊ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಎಚ್‍ಡಿಕೆ ವಿರುದ್ಧ ಮತ್ತೊಂದು ದೂರು

ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೇಂದ್ರ ವಿಭಾಗದ ಡಿಸಿಪಿಗೆ ಮತ್ತೊಂದು ದೂರು ಸಲ್ಲಿಸಲಾಗಿದೆ.

ವಂದೇ ಮಾತರಂ ಸಮಾಜ ಸೇವಾ ಸಂಘಟನೆಯ ರಾಜ್ಯಾಧ್ಯಕ್ಷ ಸಿ.ಎಂ.ಶಿವಕುಮಾರ್‍ನಾಯ್ಕ್ ಎಂಬುವವರು ದೂರು ನೀಡಿದ್ದು, ಪ್ರಕರಣದಲ್ಲಿ 5 ಕೋಟಿ ಡೀಲ್ ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಈ ಹೇಳಿಕೆ ಮೂಲಕ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಯಾರೋ ಹೋರಾಟಗಾರರು ವ್ಯವಹಾರ ಮಾಡಿಕೊಂಡಿದ್ದಾರೆ ಎಂಬ ತಪ್ಪು ಸಂದೇಶ ಬೇಡ. ಅವರನ್ನು(ಕುಮಾರಸ್ವಾಮಿ) ವಿಚಾರಣೆ ನಡೆಸಿ ಸತ್ಯವನ್ನು ಜನರ ಮುಂದಿಡಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News