ಬಿಜೆಪಿ ಸರಕಾರದ ‘ಆಪರೇಷನ್ ಬರ್ಬಾದ್’ ಕಾರ್ಯಕ್ರಮ ಯಶಸ್ವಿ: ಮಾಜಿ ಸಿಎಂ ಸಿದ್ದರಾಮಯ್ಯ

Update: 2021-03-08 14:26 GMT

ಬೆಂಗಳೂರು, ಮಾ.8: ‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ ‘ಆಪರೇಷನ್ ಬರ್ಬಾದ್’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದಕ್ಕೆ ಕಳೆದ ಮತ್ತು ಈ ವರ್ಷದ ಎರಡು ಬಜೆಟ್‍ಗಳೆ ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ 2021-22ನೆ ಸಾಲಿನ ಬಜೆಟ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಬಜೆಟ್‍ನಲ್ಲಿ ಸರಕಾರ ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು. ಆಯವ್ಯಯವನ್ನು ಇಲಾಖಾವಾರು ನೀಡದೆ ಆರು ವಲಯಗಳಾಗಿ ವಿಂಗಡಿಸಿ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ. ಇಲಾಖೆಗಳ ಕಾರ್ಯಕ್ರಮಗಳೇನು, ಕಳೆದ ವರ್ಷದ ಸಾಧನೆಗಳೇನು, ಹೊಸ ಯೋಜನೆಗಳೇನು ಎಂಬ ವಿವರಗಳೇ ಇಲ್ಲ ಎಂದರು.

ಯಡಿಯೂರಪ್ಪನವರು ರಾಜ್ಯದ ಬಜೆಟ್‍ಗೆ ಇದ್ದ ಮಹತ್ವ ಮತ್ತು ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ. ರಾಜ್ಯದಲ್ಲಿರುವ 33 ಇಲಾಖೆಗಳನ್ನು ಆರು ವಲಯಗಳನ್ನಾಗಿ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ಈ ಆರೂ ವಲಯಗಳಿಗೆ ಕಳೆದ ಬಜೆಟ್‍ನಲ್ಲಿ ನಿಗದಿಪಡಿಸಲಾಗಿದ್ದ ಅನುದಾನಕ್ಕಂತ ಕಡಿಮೆ ಹಣ ನಿಗದಿಪಡಿಸಲಾಗಿದೆ ಎಂದು ಅವರು ದೂರಿದರು.

ಸಂಕಷ್ಟಗಳ ಸರಮಾಲೆಗೆ ಸಿಲುಕಿರುವ ರೈತರು ದೇಶಾದ್ಯಂತ ಬೀದಿಗಿಳಿದಿದ್ದಾರೆ. ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರನ್ನು ದಿವಾಳಿ ಮಾಡಲು ಹೊರಟಿರುವ ಕೇಂದ್ರ ಸರಕಾರದ ಜೊತೆ ಸೇರಿರುವ ರಾಜ್ಯ ಸರಕಾರ ತನ್ನ ಬಜೆಟ್‍ನಲ್ಲೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ಒಂದು ಲಕ್ಷದವರೆಗಿನ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿನ ಕೃಷಿ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿತ್ತು. ಈ ಸರಕಾರ ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಎರಡೂ ಬಜೆಟ್‍ಗಳಲ್ಲೂ ರೈತರ ಸಾಲ ಮನ್ನಾದ ಪ್ರಸ್ತಾಪವೇ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಯಡಿಯೂರಪ್ಪನವರು ತನ್ನ ಎರಡನೇ ಬಜೆಟ್‍ನಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ನಮ್ಮ ಸರಕಾರ ಅನುಷ್ಠಾನಕ್ಕೆ ತಂದಿರುವ ಎಸ್‍ಎಸ್‍ಪಿ, ಟಿಎಸ್‍ಪಿ ಯೋಜನೆಯನ್ನು ನಿರ್ಲಕ್ಷಿಸಲಾಗಿದೆ. 2020-21 ನೇ ಸಾಲಿನಲ್ಲೂ ಈ ಯೋಜನೆಗೆ 26,930 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಬಜೆಟ್ ಗಾತ್ರ ಹೆಚ್ಚಳಕ್ಕೆ ಅನುಗುಣವಾಗಿ ಯೋಜನೆಗೆ ಅನುದಾನವನ್ನು ಹೆಚ್ಚಿಸಬೇಕಿತ್ತು. ಆದರೆ ಈ ವರ್ಷದ ಬಜೆಟ್‍ನಲ್ಲಿ ನೀಡಲಾಗಿರುವ ಅನುದಾನ 26,005 ಕೋಟಿ ರೂ.ಮಾತ್ರ ಎಂದು ಅವರು ಹೇಳಿದರು.

ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮಾಜದ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಿ ತಲಾ 500 ಕೋಟಿ ಅನುದಾನ ನಿಗದಿಪಡಿಸಿರುವುದು ಸ್ವಾಗತಾರ್ಹ. ಆದರೆ, ಅಂಬೇಡ್ಕರ್, ವಾಲ್ಮೀಕಿ, ಆದಿಜಾಂಬವ, ಬೋವಿ, ವಿಶ್ವಕರ್ಮ, ಕಾಡುಗೊಲ್ಲರ, ಅಂಬಿಗರ ಚೌಡಯ್ಯ, ಸವಿತಾ ಸಮಾಜ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟು ಕೇವಲ 500 ಕೋಟಿ ರೂ.ಅನುದಾನ ನೀಡುವ ಮೂಲಕ ತಳಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ. ಈ ಮೂಲಕ ರಾಜ್ಯದ ಬಿಜೆಪಿ ಸರಕಾರ ಸಾಮಾಜಿಕ ನ್ಯಾಯದ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಆರ್ಥಿಕತೆ ಸಕಾರಾತ್ಮಕ ಹಾದಿಯಲ್ಲಿ ಇದೆ ಎಂದು ಬಜೆಟ್‍ನಲ್ಲಿ ಹೇಳಿದ್ದಾರೆ. ಹಾಗಿದ್ದರೆ ಶೇ.14 ರಷ್ಟು ಪ್ರಗತಿಯಲ್ಲಿದ್ದ ರಾಜ್ಯದ ಆರ್ಥಿಕತೆ ಮೇಲಿನ ಅಂಕಿಅಂಶಗಳನ್ನು ನೋಡಿದರೆ ಗಾಬರಿ ಹುಟ್ಟಿಸುವಂತೆ ಇವೆ. ರಾಜ್ಯ ಆದಾಯ ಎಂದು ಹೇಳುತ್ತಿರುವುದು ಬರಿ ಸಾಲವನ್ನು. ರಾಜ್ಯದ ಇತ್ತೀಚಿನ ವರ್ಷಗಳಲ್ಲಿಯೇ ಪ್ರಥಮ ಬಾರಿ 19,485.84 ಕೋಟಿ ರೂ.ರಾಜಸ್ವ ಕೊರತೆ 2020-21 ರಲ್ಲಿ ಎದುರಾಗಿದೆ.

ಬಜೆಟ್‍ನ ಅಂದಾಜಿನ ಪ್ರಕಾರ ವಿತ್ತೀಯ ಕೊರತೆ ಜಿ.ಎಸ್.ಡಿ.ಪಿ.ಯ ಶೇ.3.48 ರಷ್ಟು ಇರುತ್ತದೆ. ಇದರ ಪ್ರಕಾರ 2021-22 ರಲ್ಲಿ ವಿತ್ತೀಯ ಕೊರತೆ ರೂ.59,240 ಕೋಟಿ ಇರುತ್ತದೆ. ಈ ವರ್ಷ 71,332 ಕೋಟಿ ರೂ.ಗಳಷ್ಟು ರಾಜ್ಯ ಸರಕಾರ ಸಾಲ ಪಡೆಯುವುದಾಗಿ ಘೋಷಿಸಿದೆ. ಇದರಿಂದ ಸರಕಾರದ ಮೇಲೆ ಬಹಳಷ್ಟು ಹೊರೆಯಾಗುತ್ತದೆ ಎಂದು ಅವರು ದೂರಿದರು.

2022-23 ರಿಂದ ಜಿ.ಎಸ್.ಟಿ. ಪರಿಹಾರ ಸ್ಥಗಿತಗೊಳ್ಳುವುದರಿಂದ ಇದರ ಜೊತೆಗೆ 30,743 ಕೋಟಿ ರೂ.ರಾಜಸ್ವ ಕೊರತೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. 2023-24 ರಲ್ಲಿ ಈ ರಾಜಸ್ವ ಕೊರತೆಯು ರೂ.46,831 ಕೋಟಿಯಾಗಲಿದೆ. 2020-21 ರಲ್ಲಿ ರೂ.70,411 ಕೋಟಿ ಸಾಲ ಮಾಡಿದೆ. 2019-20 ರವರೆಗೆ ರೂ.3,27,209 ಕೋಟಿ ರಾಜ್ಯದ ಮೇಲಿತ್ತು. ನಮ್ಮ ಸರಕಾರದ ಕಡೆಯ ವರ್ಷದಲ್ಲಿ ರೂ.2,42,420 ಕೋಟಿ ಸಾಲ ಮಾಡಲಾಗಿತ್ತು ಎಂದು ಅವರು ವಿವರಿಸಿದರು.

ರಾಜಸ್ವ ಆದಾಯವು ಕಳೆದ ಬಜೆಟ್ ಅಂದಾಜಿಕ್ಕಿಂತ ಈ ವರ್ಷದ ಅಂದಾಜಿನಲ್ಲಿ ಸುಮಾರು ರೂ.7,000 ಕೋಟಿಯಷ್ಟು ಕಡಿಮೆಯಾಗಿದೆ. ಕಳೆದ ಬಜೆಟ್‍ನ ಅಂದಾಜು ಮತ್ತು ಪರಿಷ್ಕೃತ ರಾಜಸ್ವ ಸ್ವೀಕೃತಿಯಲ್ಲಿ ರೂ.20,000 ಕೋಟಿಯಷ್ಟು ಕಡಿಮೆಯಾಗಿದೆ. ಇದಕ್ಕೆ ನೇರ ಹೊಣೆ ಕೇಂದ್ರ ಸರಕಾರದಿಂದ ಬರಬೇಕಾದ ತೆರಿಗೆ ಹಂಚಿಕೆ ಮತ್ತು ಅನುದಾನದ ಕೊರತೆಯಿಂದಾಗಿ ರಾಜ್ಯದ ಆರ್ಥಿಕತೆ ಅಯೋಮಯವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

2020-21ರ ಪರಿಷ್ಕೃತ ವೆಚ್ಚವು ರೂ. 2,29,924.73 ಕೋಟಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಬಜೆಟ್‍ನ ಅಂದಾಜಿಗಿಂತ ರೂ.8,000 ಕೋಟಿಯಷ್ಟು ಕಡಿಮೆಯಾಗಿದೆ. 2020-21ರಲ್ಲಿ ರೂ.2,37,893 ಕೋಟಿಗಳಷ್ಟು ಬಜೆಟ್ ಅನ್ನು ಮಂಡಿಸಿದ್ದರೂ ಕಡೆಯದಾಗಿ ಇಲಾಖೆಗಳಿಗೆ ನೀಡಲು ಉದ್ದೇಶಿಸಿದ್ದ ಮೊತ್ತ ರೂ.1,96,369.2 ಕೋಟಿ. ಅದರಲ್ಲಿ ಹಳೆಯ ಬಾಕಿ (2019-20 ರಲ್ಲಿ ಖರ್ಚಾಗದೇ ಬಾಕಿ ಇದ್ದ ಅನುದಾನ) ರೂ.13,491.7 ಕೋಟಿ. ಒಟ್ಟಿಗೆ ಸೇರಿ ಖರ್ಚು ಮಾಡಲು ಲಭ್ಯವಿದ್ದ ಅನುದಾನ ರೂ.2,09,860 ಕೋಟಿ. ಇಲಾಖೆಗಳಿಗೆ ಜನವರಿಯವರೆಗೆ ಬಿಡುಗಡೆ ಮಾಡಿದ್ದು ರೂ.1,42,851 ಕೋಟಿ. ಖರ್ಚಾಗಿರುವುದು ರೂ.1,30,998 ಕೋಟಿ ಮಾತ್ರ ಎಂದು ಅವರು ತಿಳಿಸಿದರು.

ಕೇಂದ್ರದ ತೆರಿಗೆ ಪಾಲು 2020-21ರ ಮೂಲ ಬಜೆಟ್‍ನಲ್ಲಿ ರೂ.28,591.23 ಕೋಟಿ ನಿರೀಕ್ಷೆ ಮಾಡಲಾಗಿತ್ತು. 2021-22 ರ ಆಯವ್ಯಯದಲ್ಲಿ ಇದು ರೂ.24,273.6 ಕೋಟಿಗೆ ಇಳಿಯಲಿದೆ. ರೂ.4,318 ಕೋಟಿಗಳಷ್ಟು ಕಡಿಮೆಯಾಗಿದೆ. ಅಂದರೆ ಶೇ.15 ರಷ್ಟು ಕಡಿಮೆಯಾಗಿದೆ. ದೇಶದ ಜಿ.ಡಿ.ಪಿ.ಯು ಶೇ.11 ಕ್ಕೂ ಹೆಚ್ಚು ಪ್ರಗತಿಯಾಗುವುದಾದರೆ ನಮಗೆ ನೀಡಬೇಕಾದ ತೆರಿಗೆ ಹಂಚಿಕೆಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರಬೇಕಿತ್ತು ಅಲ್ಲವೇ? ಕೇಂದ್ರ ಮತ್ತು ರಾಜ್ಯಗಳಲ್ಲಿನ ಎರಡೂ ಬಿ.ಜೆ.ಪಿ. ಸರಕಾರಗಳು ಜನರ ತಲೆಗೆ ಟೋಪಿ ಹಾಕುತ್ತಿವೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News