ಸಿದ್ದರಾಮಯ್ಯರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ

Update: 2021-03-08 14:37 GMT

ಬೆಂಗಳೂರು, ಮಾ. 8: ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 130ರಿಂದ 135 ಸ್ಥಾನಗಳನ್ನು ಗೆದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲೇ ಕೂರಿಸದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಸೋಮವಾರ ಬಜೆಟ್ ಮಂಡನೆ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಯವ್ಯಯ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷ ಸಭಾತ್ಯಾಗ ಮಾಡಿದ ಇತಿಹಾಸವೇ ಇಲ್ಲ. ಆದರೆ, ಇಂದು ನಾನು ಬಜೆಟ್ ಮಂಡನೆ ಮಾಡುವ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ. ನನ್ನ ನೈತಿಕತೆ ಪ್ರಶ್ನಿಸುವ ಇವರ ನೈತಿಕತೆ ಏನೆಂದು ನನಗೆ ಗೊತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಸದನಕ್ಕೆ ಬರಲಿ, ವಿಧಾನಸಭೆಯಲ್ಲಿ ಸಿಡಿ ವಿಷಯದ ಬಗ್ಗೆ ಪ್ರಸ್ತಾಪಿಸಲಿ. ಅವರು ನೀಡುವ ಸಲಹೆಯನ್ನು ಆಧರಿಸಿ ತನಿಖೆಗೆ ವಹಿಸುವ ತೀರ್ಮಾನ ಮಾಡುತ್ತೇವೆ ಎಂದ ಯಡಿಯೂರಪ್ಪ, ಇಡೀ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಯಾವುದೇ ತೆರಿಗೆ ಹೇರಿಲ್ಲ' ಎಂದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಸೇರಿದಂತೆ ಯಾವುದೇ ವರ್ಗ ಮತ್ತು ಯಾವುದೇ ಇಲಾಖೆಗೂ ನಾನು ಹಣ ಕಡಿತ ಮಾಡಿಲ್ಲ. ಹಿಂದಿನ ವರ್ಷ ಕೊಟ್ಟಿದ್ದಕ್ಕಿಂತ ಈ ಬಾರಿ ಇಲಾಖೆಗಳಿಗೆ ಹೆಚ್ಚಿಗೆ ಅನುದಾನ ನೀಡಿದ್ದೇನೆ' ಎಂದ ಅವರು, ‘ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಮನಬಂದಂತೆ ಮಾತನಾಡುತ್ತಿದ್ದಾರೆ' ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News