ಸರ್ವವ್ಯಾಪಿ, ಸರ್ವಸ್ಪರ್ಶಿ, ಸಮತೋಲಿತ ಬಜೆಟ್ ಮಂಡನೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-03-08 14:51 GMT

ಬೆಂಗಳೂರು, ಮಾ. 8: ‘ಕೋವಿಡ್‍ನಿಂದಾಗಿನ ಪ್ರತಿಕೂಲ ಆರ್ಥಿಕ ಪರಿಸ್ಥಿತಿಯಲ್ಲಿಯೂ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಬಜೆಟ್ ರೂಪಿಸುವ ಸಾಹಸ ಮಾಡಿದ್ದೇನೆ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳಿಗೆ ಹಾಗೂ ಎಲ್ಲ ವಲಯಗಳಿಗೆ ಪ್ರಾಮುಖ್ಯತೆ ನೀಡಿದ್ದು, ಎಲ್ಲ ಜಿಲ್ಲೆಗಳಿಗೂ ಯೋಜನೆಗಳ ಮೂಲಕ ನೆರವು ನೀಡಿ ಸಮತೋಲಿತ ಬಜೆಟ್ ಮಂಡನೆ ಮಾಡಲಾಗಿದೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಬಣ್ಣಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳು, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘2020-21ನೆ ಸಾಲಿನ ವರ್ಷದ ಬಜೆಟ್‍ನ ಗಾತ್ರಕ್ಕಿಂತಲೂ 8,314 ಕೋಟಿ ರೂ.ಹೆಚ್ಚಿನ ಗಾತ್ರದ ಬಜೆಟ್ ಇದಾಗಿದ್ದು, 2021-22ನೆ ಸಾಲಿನಲ್ಲಿ ಒಟ್ಟು 2,46,207 ಕೋಟಿ ರೂ.ಬಜೆಟ್ ಮಂಡನೆ ಮಾಡಿದ್ದು, ಶೇ.3.5ರಷ್ಟು ಹೆಚ್ಚಳವಾಗಿದೆ' ಎಂದು ವಿವರಿಸಿದರು.

‘ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಕಷ್ಟದ ನಡುವೆಯೂ ಯಾವುದೇ ವರ್ಗದ ಜನರ ಮೇಲೆ ಯಾವುದೇ ತೆರಿಗೆ ಹೊರೆಯನ್ನು ಹೇರದೆ ಜನಸ್ನೇಹಿ ಬಜೆಟ್ ಮಂಡಿಸಲಾಗಿದೆ. ನೈಸರ್ಗಿಕ ವಿಕೋಪ, ಪ್ರವಾಹ ಮತ್ತು ಕೋವಿಡ್ 19ರ ಕಾರಣ ಇಡೀ ರಾಜ್ಯ ತಲ್ಲಣಗೊಂಡು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಲಾಕ್‍ಡೌನ್‍ನಿಂದ ಆರ್ಥಿಕ ಚಟುವಟಿಕೆಗಳ ಸಂಪೂರ್ಣ ಸ್ಥಗಿತಗೊಂಡಿದ್ದು, ರಾಜಸ್ವ ಸಂಗ್ರಹಣೆಗೆ ಪೆಟ್ಟು ಬಿದ್ದಿತ್ತು. ಆದರೂ, ಧೃತಿಗೆಡದೆ ಬದ್ಧ ವೆಚ್ಚಗಳಾದ ವೇತನ, ಪಿಂಚಣಿ, ಸಾಲ ಮರುಪಾವತಿಯನ್ನು ಸಕಾಲದಲ್ಲಿ ಪಾವತಿಸಿದ್ದು, ರಾಜ್ಯದ ಅಭಿವೃದ್ಧಿಗೂ ಅನುದಾನ ನೀಡಲಾಗಿದೆ. ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಪರಿಸ್ಥಿತಿ ಸುಧಾರಿಸಿದೆ' ಎಂದು ಅವರು ವಿವರಿಸಿದರು.

‘ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಮಾರ್ಚ್ 8ರ ಮಹಿಳಾ ದಿನಾಚರಣೆಯಂದು ಮಂಡಿಸಿರುವ ಈ ಆಯವ್ಯಯದಲ್ಲಿ ಮಹಿಳೆಯರ ಸ್ವಾವಲಂಬನೆ, ಸುರಕ್ಷತೆ, ಉದ್ಯಮಶೀಲತೆ ಮತ್ತು ಅಭ್ಯುದಯಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ' ಎಂದು ಅವರು ತಿಳಿಸಿದರು.

‘ಮಹಿಳಾ ಉದ್ಯಮಿಗಳಿಗೆ ಶೇ. 4ರ ರಿಯಾಯಿತಿ ದರದಲ್ಲಿ 2 ಕೋಟಿ ರೂ.ವರೆಗೆ ಸಾಲ ಸೌಲಭ್ಯ. ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ‘ವನಿತಾ ಸಂಗಾತಿ’ ಯೋಜನೆ ಜಾರಿ ಮಾಡಲಾಗುವುದು ಎಂದ ಅವರು,      ಸಿಎಂ ಮೇಲ್ವಿಚಾರಣೆಯಲ್ಲಿ ಮಹಿಳಾ ಸಬಲೀಕರಣ ಮತ್ತು ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.

ಅಭಿವೃದ್ಧಿ ಪೂರಕ: ಹಣಕಾಸು ಸಚಿವನೂ ಆಗಿ ಮುಖ್ಯಮಂತ್ರಿಯಾಗಿ ನಾನು ಎಂಟನೆ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು, ಕೋವಿಡ್ ಸಂಕಷ್ಟದಲ್ಲಿಯೂ ಆರ್ಥಿಕ ಪರಿಸ್ಥಿತಿಗಳನ್ನು ಸರಿದೂಗಿಸಿಕೊಂಡು ಆಯವ್ಯಯ ಮಂಡಿಸಿದ್ದೇನೆ. ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆ ಮಾಡಿದ್ದೇನೆಂಬ ತೃಪ್ತಿ ಇದೆ ಎಂದು ಅವರು ತಿಳಿಸಿದರು.

‘ಕೊರೋನ ಸಂಕಷ್ಟ ಮತ್ತು ಸಂಪನ್ಮೂಲ ಕೊರತೆ ನಡುವೆಯೂ ಹಿಂದಿನ ಸರಕಾರಗಳ ಅವಧಿಯಲ್ಲಿ ಜಾರಿಗೊಳಿಸಿದ್ದ ಎಲ್ಲ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು. ಯಾವುದೇ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News