ಬೆಳಗಾವಿ ಪಾಲಿಕೆ ಬಳಿ ಭಗವಾ ಧ್ವಜ ಹಾರಿಸಲು ಯತ್ನ: ಎಂಇಎಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2021-03-08 15:59 GMT

ಬೆಳಗಾವಿ, ಮಾ.8: ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡ ಧ್ವಜದ ಬಳಿ ಭಗವಾ ಧ್ವಜ ಹಾರಿಸಲು ಯತ್ನಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಮಾಜಿ ಮೇಯರ್ ಸೇರಿ ಒಟ್ಟು ಐವರು ಕಾರ್ಯಕರ್ತೆಯರನ್ನು ಸೋಮವಾರ ಬೆಳಗಾವಿ ಮಾರುಕಟ್ಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಲಿಕೆ ಎದುರು ಕನ್ನಡ ಪರ ಹೋರಾಟಗಾರರು ಕನ್ನಡ ಧ್ವಜ ಹಾರಿಸಿರುವುದನ್ನು ವಿರೋಧಿಸಿ, ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರು ಬೆಳಗಾವಿ ನಗರದ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜತೆಗೆ ಕಾರ್ಯಕರ್ತರು ಪಾಲಿಕೆ ಎದುರು ಹೋಗಿ ಭಗವಾ ಧ್ವಜ ಹಾರಿಸಲು ಯತ್ನಿಸಿದಾಗ ಪೊಲೀಸರು ಅದಕ್ಕೆ ತಡೆವೊಡ್ಡಿ ಐವರನ್ನು ಬಂಧಿಸಿದರು. 

ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮೇಯರ್ ಸರಿತಾ ಪಾಟೀಲ, ರೇಣು ಕಿಲ್ಲೇಕರ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರೊಂದಿಗೆ ಅವರು ವಾಗ್ವಾದ ನಡೆಸಿದರು. ಪಾಲಿಕೆ ಎದುರು ಹಾಕಿರುವ ಕನ್ನಡ ಧ್ವಜ ತೆರವುಗೊಳಿಸಬೇಕು. ಇಲ್ಲವೇ ನಮಗೂ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಮುಂಜಾಗ್ರತಾ ಕ್ರಮವಾಗಿ ನಗರಪಾಲಿಕೆ ಆವರಣ ಸೇರಿದಂತೆ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಹಾರಾಷ್ಟ್ರದ ಶಿವಸೇನಾ ಮುಖಂಡ ವಿಜಯದ ದೇವಣೆ ಹಾಗೂ ಸಂಗಡಿಗರಿಗೆ ಜಿಲ್ಲಾ ಗಡಿ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದರು.

ಮರಾಠಿ ಭಾಷೆಯಲ್ಲಿ ಘೋಷಣೆ

ರಾಜ್ಯದ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಲೇಬೇಕು. ಬೆಳಗಾವಿ ನಮ್ಮದು. ಯಾರ ಅಪ್ಪಂದಲ್ಲ ಎಂದು ಎಂಇಎಸ್, ಶಿವಸೇನೆ ಕಾರ್ಯಕರ್ತರು ಮರಾಠಿ ಭಾಷೆಯಲ್ಲಿ ಘೋಷಣೆ ಕೂಗಿದ್ದಾರೆ.

'ಮೊಕದ್ದಮೆ ದಾಖಲಿಸಿ'

‘ಮಹಾರಾಷ್ಟ್ರದ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಬೆಳಗಾವಿಗೆ ಬರದಂತೆ ತಡೆಗಟ್ಟಬೇಕು. ಹಾಗೊಂದು ಬಾರಿ ಭಗವಾ ಧ್ವಜವನ್ನು ಹಾರಿಸಲು ಒಳ ನುಗ್ಗಲು ಯತ್ನಿಸಿದರೆ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಸೋಲ್ಲಾಪುರ ಕೂಡ ನಮ್ಮ ರಾಜ್ಯಕ್ಕೆ ಸೇರಿದ್ದಾಗಿದ್ದು, ನಾವು ಕೂಡ ಅಲ್ಲಿಗೆ ಹೋಗಿ ಪ್ರತಿಭಟನೆ ನಡೆಸಬೇಕಾಗುತ್ತದೆ.’ 

-ಪ್ರವೀಣ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)

ಗಡಿಯಲ್ಲೆ ತಡೆ

‘ಮಹಾರಾಷ್ಟ್ರದಿಂದ ಬೆಳಗಾವಿಗೆ ಬರದಂತೆ ಈಗಾಗಲೇ ಎಂಇಎಸ್ ಹಾಗೂ ಶಿವಸೇನೆಗೆ ನೋಟಿಸ್ ನೀಡಲಾಗಿತ್ತು. ಆದರೂ ಕಾರ್ಯಕರ್ತರು ಬೆಳಗಾವಿ ಗಡಿಯಲ್ಲಿ ಒಳನುಗ್ಗಲು ಯತ್ನಿಸಿದ್ದು ಅವರನ್ನು ತಡೆಯಲಾಗಿದೆ.’

-ಡಾ.ವಿಕ್ರಮ ಅಮಟೆ, ಬೆಳಗಾವಿ ಡಿಸಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News