ಕಾವೇರಿ ಕೂಗು ಅಭಿಯಾನದಡಿ ಹಣ ಸಂಗ್ರಹಣೆ: ತನಿಖೆ ಕುರಿತಂತೆ ಸರಕಾರದ ನಿಲುವು ಕೇಳಿದ ಹೈಕೋರ್ಟ್

Update: 2021-03-08 18:11 GMT

ಬೆಂಗಳೂರು, ಮಾ.8: ಕಾವೇರಿ ಕೂಗು ಅಭಿಯಾನವನ್ನು ಸರಕಾರಿ ಯೋಜನೆ ಎಂದು ಬಿಂಬಿಸಿ ಸಾರ್ವಜನಿಕರಿಂದ ಹಣ ಪಡೆಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುವ ಕುರಿತು ಸರಕಾರ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮೌಖಿಕವಾಗಿ ಸೂಚಿಸಿದೆ.

ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಈಶ ಫೌಂಡೇಶನ್ ಕಾವೇರಿ ಕೂಗು ಅಭಿಯಾನ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಸ್ಪಷ್ಟನೆ ನೀಡಿ, ಕಾವೇರಿ ಕೂಗು ಯೋಜನೆ ಸಂಪೂರ್ಣವಾಗಿ ಈಶ ಫೌಂಡೇಶನ್/ಈಶ ಔಟ್ ರೀಚ್‍ಗೆ ಸಂಬಂಧಿಸಿದ್ದು. ಈ ಯೋಜನೆಯಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ. ಯೋಜನೆಗೆ ಸರಕಾರದ ಯಾವುದೇ ಭೂಮಿ ಅಥವಾ ಹಣ ಕೊಡುತ್ತಿಲ್ಲ ಎಂದು ವಿವರಿಸಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಕಾವೇರಿ ಕೂಗು ಅಭಿಯಾನವನ್ನು ಸರಕಾರಿ ಯೋಜನೆ ಎಂದು ಬಿಂಬಿಸಿ ಹಣ ಸಂಗ್ರಹಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರಕಾರದ ಪರ ವಕೀಲರು, ಯೋಜನೆಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈಶ ಫೌಂಡೇಶನ್ ಕೂಡ ಇದು ಸರಕಾರದ ಯೋಜನೆಯಲ್ಲ ಎಂದು ತಿಳಿಸಲು ಸಾಕಷ್ಟು ಕಾಲಾವಕಾಶ ತೆಗೆದುಕೊಂಡಿದ್ದಾರೆ. ಹೀಗಾಗಿ, ಕಾವೇರಿ ಕೂಗು ಯೋಜನೆಯನ್ನು ಸರಕಾರಿ ಯೋಜನೆ ಎಂದು ಹಣ ಸಂಗ್ರಹಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲು ಅಧಿಕಾರಿ ನೇಮಕ ಮಾಡಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸಿ. ಇಲ್ಲದಿದ್ದರೇ ನ್ಯಾಯಾಲಯವೇ ಸೂಕ್ತ ನಿರ್ದೇಶನ ನೀಡಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News