ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ

Update: 2021-03-09 05:27 GMT

ಶಿವಮೊಗ್ಗ, ಮಾ.9:  ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಬಳಿ ಭಾರೀ ಪ್ರಮಾಣದ ಸ್ಫೋಟಕ ತುಂಬಿದ್ದ ಎರಡು ವಾಹನಗಳು ಸೋಮವಾರ ಪತ್ತೆಯಾಗಿವೆ. ಇವುಗಳಲ್ಲಿ 904 ಕೆ.ಜಿ. ಜಿಲೆಟಿನ್ ಕಡ್ಡಿ, 3,267 ಡಿಟೊನೇಟರ್ ಗಳು ಸೇರಿದಂತೆ ಹಲವಾರು ಸ್ಫೋಟಕ ವಸ್ತುಗಳು ಇದ್ದವು ಎಂದು ತಿಳಿದುಬಂದಿದೆ. 

ಟಾಟಾ 407 ವಾಹನದಲ್ಲಿ 36 ಬಾಕ್ಸ್ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಪಿಕ್ ಅಪ್ ವಾಹನದಲ್ಲಿ 3,267 ಎಲೆಕ್ಟ್ರಾನಿಕ್ ಡಿಟೊನೇಟರ್ ಗಳು, 9 ಮೀಟರ್ ನ 79 ಎಕ್ಸೆಲ್ ಗಳು, 3 ಮೀಟರ್ ಉದ್ದದ‌ 105 ಎಕ್ಸೆಲ್ ಗಳು ಇದ್ದವು ಎಂದು ತಿಳಿದುಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಫೋಟಕಗಳನ್ನು ಸುರಕ್ಷಿತಗೊಳಿಸಿದ್ದಾರೆ.

ಸ್ಫೋಟಕ ಎಲ್ಲಿಂದ ಬಂತು? 

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಾಮಗಾರಿ ಸ್ಥಳದಲ್ಲೇ ಕ್ವಾರಿ ಒದಗಿಸಲಾಗಿದೆ. ಇಲ್ಲಿಯೇ ಬಂಡೆ ಸ್ಫೋಟಿಸಿ, ಕಾಮಗಾರಿಗೆ ಜೆಲ್ಲಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಬಳಸುವ ಸ್ಫೋಟಕಗಳ ಪೂರೈಕೆಗೆ ಚಿಕ್ಕಬಳ್ಳಾಪುರದ ಸ್ಫೋಟಕ ಪೂರೈಕೆ ಕಂಪೆನಿಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಬಂಡೆ ಸ್ಫೋಟಿಸಲು ಈ ಕಂಪನಿಯವರು ಸ್ಫೋಟಕಗಳನ್ನು ತಂದಿದ್ದರು. ಎರಡು ವಾಹನಗಳನ್ನು  ಸ್ಫೋಟಕಗಳನ್ನು ಹಾಗೆ ಬಿಟ್ಟು ಹೋಗಿದ್ದರಿಂದ, ಆತಂಕ ಸೃಷ್ಟಿಯಾಗಿತ್ತು ಎಂದು ತಿಳಿದುಬಂದಿದೆ. 

ಬಿಟ್ಟು ಹೋಗಿದ್ದು ಏಕೆ?

ಹುಣಸೋಡು ಕ್ವಾರಿಯಲ್ಲಿ ಸ್ಫೋಟ ಪ್ರಕರಣದ ಬಳಿಕ ಸ್ಫೋಟಕಗಳ ಬಳಕೆ, ಸಾಗಾಟಕ್ಕೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಫೋಟಕ ಪೂರೈಕೆ ಕಂಪೆನಿಯವರು ಸ್ಫೋಟಕ ಬಳಕೆ ಬಗ್ಗೆ ಜಿಲ್ಲಾಧಿಕಾರಿಯ ಅನುಮತಿ ಕೇಳಿದ್ದು, ಮಂಗಳೂರಿನಲ್ಲಿರುವ  ಪೆಟ್ರೋಲಿಯಂ ಮತ್ತು ಎಕ್ಸ್ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಶನ್ ನಿಂದ ಅನುಮತಿ ಪಡೆಯುವಂತೆ ಡಿಸಿ ಸೂಚಿಸಿದ್ದರೆನ್ನಲಾಗಿದೆ. ಅದರಂತೆ ಅನುಮತಿ ಪಡೆಯಲು ಮುಂದಾದಾಗ ಸ್ಫೋಟಕಗಳ ಸಾಗಾಟಕ್ಕೆ ಸಂಬಂಧಿಸಿ ಸ್ಫೋಟಕ ಪೂರೈಕೆ ಕಂಪೆನಿ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇದೆ ಗೊಂದಲದಿಂದ ಸ್ಫೋಟಕವನ್ನು ಅಲ್ಲಿಯೇ ಇರಿಸಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ. 

ವಾಹನದಲ್ಲಿ ಸ್ಫೋಟಕ ಇರುವ ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ದೀಪಕ್  ನೇತೃತ್ವದ ತಂಡ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. 

ನಿಗದಿತ ದೂರಕ್ಕಿಂತಲೂ ಹೆಚ್ಚು ದೂರ ಸ್ಫೋಟಕ ಸಾಗಣೆ ಮತ್ತು ಅದನ್ನು ಅರ್ಧ ದಾರಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಸಂಬಂಧ, ಚಿಕ್ಕಬಳ್ಳಾಪುರದ ಸ್ಫೋಟಕ ಪೂರೈಕೆ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News