ಶಾಸಕ ಸಂಗಮೇಶ್ ಅಂಗಿ ಬಿಚ್ಚಿದ ವಿಚಾರ: ಗದ್ದಲದ ನಡುವೆ ‘ಹಕ್ಕುಚ್ಯುತಿ ಸಮಿತಿ'ಗೆ ಒಪ್ಪಿಸಲು ಸ್ಪೀಕರ್ ರೂಲಿಂಗ್
ಬೆಂಗಳೂರು, ಮಾ. 9: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರು ಸದನದಲ್ಲಿ ಅಂಗಿ ಬಿಚ್ಚಿ ಘೋಷಣೆ ಕೂಗಿ ಅಸಭ್ಯ, ಅಶಿಸ್ತು ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ವಿಧಾನಸಭೆ ‘ಹಕ್ಕುಚ್ಯುತಿ ಸಮಿತಿ'ಗೆ ವಹಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರೂಲಿಂಗ್ ನೀಡಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಅರಗ ಜ್ಞಾನೇಂದ್ರ, ‘ಸಂಗಮೇಶ್ ಅವರು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಇತಿಹಾಸವಿದೆ. ಸ್ಪೀಕರ್ ಪೀಠಕ್ಕೆ ತನ್ನದೇ ಘನತೆ, ಗೌರವವಿದೆ. ಅಲ್ಲದೆ, ತಮ್ಮನ್ನು ಮಾಧ್ಯಮಗಳಲ್ಲಿ ಟೀಕಿಸಿದ್ದಾರೆ' ಎಂದು ಉಲ್ಲೇಖಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಈಗಾಗಲೇ ಸಂಗಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಆದರೆ, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರೆ ಸಮರ್ಥನೆ ಮಾಡಿಕೊಳ್ಳಲು ಅವರು ಸದನದಲ್ಲಿ ಇಲ್ಲ. ಹೀಗಾಗಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡಬಾರದು. ಈ ಹಿಂದೆ ನಿಮ್ಮ ಪಕ್ಷದ ಶಾಸಕ ಗೂಳಿಹಟ್ಟಿ ಶೇಖರ್ ಅವರ ಅಂಗಿ ಹರಿದುಕೊಂಡ ಮೇಜು ಏರಿ ಪ್ರತಿಭಟನೆ ನಡೆಸಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ' ಎಂದು ಪ್ರಶ್ನಿಸಿದರು.
ಸಂಗಮೇಶ್ ಮತ್ತವರ ಕುಟುಂಬದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಅವರು ಪ್ರಶ್ನಿಸಿದ್ದು, ಪ್ರತಿಭಟನಾತ್ಮಕವಾಗಿ ತಮ್ಮ ಶರ್ಟ್ ಬಿಚ್ಚಿ ಘೋಷಣೆ ಕೂಗಿದ್ದಾರೆ. ಈಗಾಗಲೇ ಅವರನ್ನು ಅಮಾನತು ಮಾಡಿದ್ದು, ಹಕ್ಕುಚ್ಯುತಿ ಸಮಿತಿಗೆ ಪ್ರಕರಣವನ್ನು ವಹಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು. ಹೀಗಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಗದ್ದಲ ಸೃಷ್ಟಿಯಾಯಿತು.
ತರಾತುರಿಯಲ್ಲೇ ಸ್ಪೀಕರ್, ಹಕ್ಕುಚ್ಯುತಿ ಸಮಿತಿಗೆ ವಹಿಸುವ ತೀರ್ಮಾನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂಗಮೇಶ್ ಪ್ರಕರಣ ಹಕ್ಕುಚ್ಯುತಿ ಸಮಿತಿ ವಹಿಸುವುದನ್ನು ವಿರೋಧಿಸಿ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಕಾಂಗ್ರೆಸ್ ಸದಸ್ಯರು ಅವರನ್ನು ಅನುಸರಿಸಿ, ಸಿಡಿ, ಸಿಡಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಇದರಿಂದ ಸದನದಲ್ಲಿ ಗದ್ದಲ-ಕೋಲಾಹಲ ಸೃಷ್ಟಿಯಾಯಿತು. ಇತ್ತ ಕಾಂಗ್ರೆಸ್ ಸದಸ್ಯರು ಸಿಡಿ ಸಿಡಿ ಎಂದು ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರೆ, ಬಿಜೆಪಿ ಸದಸ್ಯರು ಪಾಕಿಸ್ತಾನಿ ಏಜೆಂಟರು, ಸಿಡಿ, ಸಿಡಿಯಲ್ಲ ನೀವೆಲ್ಲ ಹೇಡಿಗಳು' ಎಂದು ತಿರುಗೇಟು ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ, ‘ಸಂಗಮೇಶ್ ಪ್ರಕರಣವನ್ನು ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸುವುದು ಸೂಕ್ತ' ಎಂದು ಹೇಳಿದರು.
ಈ ಗದ್ದಲದ ನಡುವೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸಂಗಮೇಶ್ ಸದನದಲ್ಲಿ ಅಸಭ್ಯ ಮತ್ತು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಈ ಪ್ರಕರಣದ ತನಿಖೆಯನ್ನು ಸದನದ ‘ಹಕ್ಕುಚ್ಯುತಿ ಸಮಿತಿ'ಗೆ ವಹಿಸಲಾಗುವುದು. ಯಾರು ಎಷ್ಟೇ ಅಡ್ಡಿ, ಆತಂಕ ಸೃಷ್ಟಿಸಿದರೂ, ಸ್ಪೀಕರ್ ಪೀಠದ ಘನತೆ, ಗೌರವವನ್ನು ಎತ್ತಿ ಹಿಡಿಯುತ್ತೇನೆ' ಎಂದು ಸ್ಪಷ್ಟಪಡಿಸಿದರು.
‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಸದಸ್ಯರ ಅನುಚಿತ ವರ್ತನೆ ಸಮರ್ಥಿಸುವುದು ದುರದೃಷ್ಟಕರ. ಈ ಪ್ರಕರಣದಿಂದ ಕಾಂಗ್ರೆಸ್ ಸದಸ್ಯ ಅಂಗಿ ಬಿಚ್ಚಿದ್ದನ್ನು ಸಮರ್ಥಿಸುವ ಮೂಲಕ ಕಾಂಗ್ರೆಸ್ ಪಕ್ಷ ಬೀದಿಗೆ ಬಂದಿದೆ. ದೇಶದ ಜನತೆ ಇವರಿಗೆ ಅಂಗಿ ಬಿಚ್ಚಿಸಿದ್ದಾರೆ. ಹೀಗಾಗಿ ಶಾಸಕ ಸಂಗಮೇಶ್ ಅವರನ್ನು ವಜಾ ಮಾಡಬೇಕು'
-ಅರಗ ಜ್ಞಾನೇಂದ್ರ, ಆಡಳಿತ ಪಕ್ಷ ಸದಸ್ಯ
‘ಈ ಹಿಂದೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ತಮ್ಮ ಅಂಗಿ ಹರಿದುಕೊಂಡು ಮೇಜು ಏರಿ ಪ್ರತಿಭಟನೆ ನಡೆಸಿದ್ದರು. ಆಗ ಯಾವುದೇ ಕ್ರಮ ಕೈಗೊಳ್ಳದೇ ಇದೀಗ ಸಂಗಮೇಶ್ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ. ಸಂಗಮೇಶ್ ಅವರು ಯಾವುದೆ ಅಸಭ್ಯ ವರ್ತನೆ ತೋರಿಲ್ಲ. ತಮ್ಮ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪ್ರತಿಭಟನಾತ್ಮಕವಾಗಿ ಅಂಗಿ ಕಳಚಿ ಘೋಷಣೆ ಕೂಗಿದ್ದಾರೆ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ