×
Ad

ಮೈಸೂರು: ಉದ್ಯಾನವನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2021-03-09 15:50 IST
ಸಾಂದರ್ಭಿಕ ಚಿತ್ರ

ಮೈಸೂರು,ಮಾ.9: ಆದಿವಾಸಿ ಬುಡಕಟ್ಟು ಮಹಿಳೆಯೋರ್ವರಿಗೆ ರಸ್ತೆಯಲ್ಲೇ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗುವಷ್ಟರಲ್ಲೇ ಉದ್ಯಾನವನದಲ್ಲೇ ದೈಹಿಕ ಶಿಕ್ಷಕಿಯೊಬ್ಬರು ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕೊಣಂಗೇರಿಯ ಮಲ್ಲಿಗೆ ಎಂಬಾಕೆ ತನ್ನ ಎರಡು ಮಕ್ಕಳೊಂದಿಗೆ ಮೈಸೂರಿನ ಹೋಟೆಲ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಆಕೆಯ ಪತಿಯು ಎರಡು ಮಕ್ಕಳಾಗಿ, ಮತ್ತೊಮ್ಮೆ ಹೆಂಡತಿ ಗರ್ಭವತಿಯಾದ ಸಂದರ್ಭ ಹೆಂಡತಿಯನ್ನು ತೊರೆದು ಹೋಗಿದ್ದಾನೆ. ಮೊನ್ನೆ ತಂದೆ ಮನೆಗೆ ಹೋಗಿದ್ದ ಈಕೆ ಇಂದು ಮೈಸೂರಿಗೆ ಮಂಗಳವಾರ ಬೆಳಗ್ಗೆ 8 ಗಂಟೆ ಸಮಯಕ್ಕೆ ಬಂದಿದ್ದಾಳೆ.

ಬಸ್ ಇಳಿದು ಬಂದ ಈಕೆ ಹೆರಿಗೆ ನೋವು ಹೆಚ್ಚಾಗುತ್ತಿದ್ದಂತೆ ಪೀಪಲ್ಸ್ ಪಾರ್ಕ್ ಬಳಿಯ ಉದ್ಯಾನವನದಲ್ಲಿ ಕುಳಿತುಕೊಂಡು ನರಳಾಡುತ್ತಿದ್ದಳು. ಈಕೆಯ ಎರಡು ಮಕ್ಕಳು ಅಮ್ಮನ ಪರಿಸ್ಥಿತಿ ಕಂಡು ದಾರಿಯಲ್ಲಿ ಹೋಗುವವರನ್ನೆಲ್ಲಾ ಕರೆಯಲಾರಂಭಿಸಿದ್ದಾರೆ. ಇವರ ಪರಿಸ್ಥಿತಿ ಮತ್ತು ಈಕೆಯ ನರಳಾಟ ಕಂಡ ದೈಹಿಕ ಶಿಕ್ಷಕಿಯೊಬ್ಬರು ಪಾರ್ಕ್‍ನಲ್ಲೆ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ನಂಜನಗೂಡು ತಾಲೂಕು ನವಿಲೂರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕಿ ಶೋಭಾಕುಮಾರಿ ಎಂದಿನಂತೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಆಗ ಜನರು ಗುಂಪುಗೂಡಿರುವುದನ್ನು ಕಂಡು ಮತ್ತು ಆಕೆಯ ಇಬ್ಬರು ಮಕ್ಕಳು ರೋಧಿಸುತ್ತಿರುವುದನ್ನು ಕಂಡ ಈಕೆ ಕೂಡಲೇ ಆಂಬುಲೆನ್ಸ್ ಗೆ ಫೋನ್ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ಬರುವುದು ವಿಳಂಬವಾಗಿದೆ.

ಮಹಿಳೆಗೆ ಹೆರಿಗೆ ನೋವು ಹೆಚ್ಚಾದ ಹಿನ್ನಲೆಯಲ್ಲಿ ಸ್ಥಳೀಯ ವೈದ್ಯರೊಬ್ಬರಿಗೆ ಕರೆ ಮಾಡಿ ವೈದ್ಯರ ಸಲಹೆಯಂತೆ ಶಿಕ್ಷಕಿ ಶೋಭಾ ಕುಮಾರಿ ಹೆರಿಗೆಗೆ ಮುಂದಾಗಿದ್ದಾರೆ. ಘಟನೆ ಕಂಡು ಅಕ್ಕಪಕ್ಕದ ಟೀ ಅಂಗಡಿ ಮಾಲಕರು ಟಾರ್ಪಲ್, ಬಟ್ಟೆಗಳನ್ನು ನೀಡಿ ಹೆರಿಗೆಗೆ ಸಹಕಾರ ನೀಡಿದ್ದಾರೆ. ಅಂತಿಮವಾಗಿ ಪಾರ್ಕ್ ನಲ್ಲೇ ಹೆರಿಗೆ ಮಾಡಿಸುವ ಮೂಲಕ ತಾಯಿ, ಮಗು ಜೀವ ಕಾಪಾಡಿ ಶಿಕ್ಷಕಿ ಶೋಭಾ ಸೇರಿದಂತೆ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ. 

ನಂತರ ಮಹಿಳೆಯನ್ನು ಚಲುವಾಂಬ ಮಕ್ಕಳ ಆಸ್ಪತ್ರೆಗೆ ಸೇರಿಸಲಾಯಿತು. ಮಹಿಳೆಗೆ ಮದನ್ ಮತ್ತು ರೇಖಾ ಎಂಬ ಎರಡು ಮಕ್ಕಳ ಜೊತೆ ಇದೀಗ ಮತ್ತೊಂದು ಹೆಣ್ಣು ಮಗು ಜನಿಸಿದೆ. 

ಮಲ್ಲಿಗೆ ಎಂಬಾಕೆಗೆ ಉದ್ಯಾನವನದಲ್ಲೇ ಹೆರಿಗೆಯಾಗಿ ನಂತರ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಲಾಗಿದೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು, ತಾಯಿ ನವಜಾಥ ಶಿಶು ಮತ್ತು ಇನ್ನಿಬ್ಬರು ಮಕ್ಕಳನ್ನು ಇಂದು ನಮ್ಮ ಆಸ್ಪತ್ರೆಯಲ್ಲೆ ಇಟ್ಟುಕೊಂಡು ನೋಡಿಕೊಳ್ಳಲಾಗುವುದು. ನಾಳೆ ಬಾಲಕರ ಬಾಲಮಂದಿರದವರು ಕರೆದುಕೊಂಡು ಹೋಗಿ ಆಕೆ ಸುಸ್ಥಿತಿಗೆ ಬರುವವರೆಗೂ ನೋಡಿಕೊಳ್ಳಲಿದ್ದಾರೆ.
-ಡಾ.ರಾಜೇಂದ್ರ ಕುಮಾರ್, ಸ್ಥಾನಿಕ ವೈದ್ಯಾಧಿಕಾರಿ, 
ಚಲುವಾಂಭ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಮೈಸೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News