ನಿಮಗೆ ಆಗದಿದ್ದರೆ ಹೇಳಿ, ಕೋವಿ ಹಿಡಿದು ನಾವೇ ಕಾಡಿಗೆ ಹೋಗುತ್ತೇವೆ: ಸರಕಾರದ ವಿರುದ್ಧ ಕೊಡಗಿನ ಶಾಸಕರ ಆಕ್ರೋಶ
ಬೆಂಗಳೂರು, ಮಾ. 9: ‘ನಾಲ್ಕು ಜನರನ್ನು ತಿಂದು ಹಾಕಿದ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ನಿಯಂತ್ರಣ ಮಾಡಬೇಕು. ನಿಮಗೆ ಆಗದಿದ್ದರೆ ‘ಹುಲಿ ಮದುವೆ' ಮಾಡಿಕೊಳ್ಳಲು ನಮಗಾದರೂ ಅವಕಾಶ ಕೊಡಿ, ಕೋವಿ ಹಿಡಿದು ನಾವೇ ಕಾಡಿಗೆ ಹೋಗುತ್ತೇವೆ' ಎಂದು ಕೊಡಗು ಜಿಲ್ಲೆಯ ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದ ವಿಚಿತ್ರ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಯಿತು.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ ವಿಷಯ ಪ್ರಸ್ತಾಪಿಸಿ, ‘ಕೊಡಗಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ನಾಲ್ವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಹೀಗಾಗಿ ಹುಲಿ ಕೊಲ್ಲಲು ನಮಗಾದರೂ ಅನುಮತಿ ಕೊಡಿ' ಎಂದು ಮನವಿ ಮಾಡಿದರು.
‘ಅರಣ್ಯ ಇಲಾಖೆ ಹುಲಿ ಹತ್ಯೆಗೆ ಕ್ರಮ ಕೈಗೊಳ್ಳಬೇಕು, ಹುಲಿ ಕಾಟದಿಂದ ಕಾರ್ಮಿಕರು ಕಾಫಿ ತೋಟಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಹುಲಿ ಕೊಲ್ಲಲು ಆದೇಶವಾಗಿದೆ. ಆದರೆ, ಅಧಿಕಾರಿಗಳು ಆನೆಯ ಮೇಲೆ ಕುಳಿತುಕೊಂಡು ಕಾಡಿನಲ್ಲಿ ಸುತ್ತಾಡಿದರೆ ಹುಲಿ ಸಿಗುತ್ತಾ? ನಿಮ್ಮ ಕೈಯಲ್ಲಿ ಆಗಿಲ್ಲ ಅಂದರೆ ಹೇಳಿ ನಾವು ಹುಲಿ ಮದುವೆ ಮಾಡಿಕೊಳ್ಳುತ್ತೇವೆ' ಎಂದು ಬೋಪಯ್ಯ ಸರಕಾರಕ್ಕೆ ವಿಚಿತ್ರ ಮನವಿಯನ್ನಿಟ್ಟರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್, ‘ಸರಕಾರ ಕೂಡಲೇ ನರಭಕ್ಷಕ ವ್ಯಾಘ್ರನ ಹತ್ಯೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮಗೆ ಅವಕಾಶ ಕೊಡಿ. ನಾನೇ ಕೋವಿ ತೆಗೆದುಕೊಂಡು ಕಾಡಿಗೆ ಹೋಗುತ್ತೇನೆ. ನಮ್ಮ ವಿರುದ್ಧ ಜನ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ ಸರಕಾರ ಹುಲಿ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.
ಗುಂಡಿಕ್ಕಲು ಆದೇಶ: ಬಳಿಕ ಸರಕಾರದ ಪರವಾಗಿ ಉತ್ತರ ನೀಡಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ‘ಈಗಾಗಲೇ ನರಭಕ್ಷಕ ವ್ಯಾಘ್ರನ ಹಾವಳಿ ತಡೆಗೆ ಸರಕಾರ ಕ್ರಮ ವಹಿಸಿದೆ. ಒಂದು ಹೆಣ್ಣು ಹುಲಿಯನ್ನು ಸೆರೆ ಹಿಡಿದಿದ್ದು, ಗಂಡು ಹುಲಿಯನ್ನು ಕೊಲ್ಲಲು ಆದೇಶ ನೀಡಲಾಗಿದೆ. ಆದರೆ, ಹುಲಿ ಕೊಲ್ಲಲು ಬೇರೆಯವರಿಗೆ ಅನುಮತಿ ಕೊಡಲು ಸಾಧ್ಯವಿಲ್ಲ' ಎಂದು ತಿಳಿಸಿದರು.