ವಿಧಾನಸಭೆಯಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು
ಬೆಂಗಳೂರು, ಮಾ.9: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ಸಂದರ್ಭ ಕಾಂಗ್ರೆಸ್ ಸದಸ್ಯರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಪ್ರಸಂಗ ನಡೆಯಿತು.
ಮಂಗಳವಾರ ಬಜೆಟ್ ಅಧಿವೇಶನದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ನಿಲುವಳಿ ಸೂಚನೆ ಅಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಹೊರ ದೇಶಗಳ ಪೆಟ್ರೋಲ್, ಡಿಸೇಲ್ ದರಗಳನ್ನು ಉಲ್ಲೇಖ ಮಾಡಿದರು. ಪಾಕಿಸ್ತಾನದಲ್ಲಿ ಪೆಟ್ರೋಲ್ ಲೀ.ಗೆ 51 ರೂ. , ಡೀಸೆಲ್ ಪ್ರತೀ ಲೀ. ಗೆ 52.91, ಬಾಂಗ್ಲಾ ದೇಶದಲ್ಲಿ ಪೆಟ್ರೋಲ್ ಲೀ.ಗೆ 76.7, ಡೀಸೆಲ್ ಪ್ರತೀ ಲೀ. ಗೆ 56.01, ಶ್ರೀಲಂಕಾದಲ್ಲಿ ಪೆಟ್ರೋಲ್ ಲೀ.ಗೆ 60.33, ಡೀಸೆಲ್ ಪ್ರತೀ ಲೀ. ಗೆ 38.97 ಪೈಸೆ ಇದೆ ಎಂದು ಹೇಳಿದರು.
ಅಲ್ಲದೇ, ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಈ ಬಗ್ಗೆ ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಶ್ರೀರಾಮನ ಭಾರತದಲ್ಲಿ ಪೆಟ್ರೋಲ್ ದರ 100ಕ್ಕೆ ಏರಿಕೆ ಆಗಿದೆ. ರಾವಣನ ಲಂಕಾದಲ್ಲಿ 60 ರೂ. ಇದೆ ಎಂದು ಹೇಳಿದರು. ಈ ಸಂದರ್ಭ ಕಾಂಗ್ರೆಸ್ ಸದಸ್ಯರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಕೊನೆಗೂ ನಿಮ್ಮ ಬಾಯಲ್ಲಿ ಜೈ ಶ್ರೀರಾಮ್ ಘೋಷಣೆ ಕೇಳಿ ಖುಷಿ ಆಯಿತು ಎಂದು ವ್ಯಂಗ್ಯವಾಡಿದರು. ಈ ವೇಳೆ ಸಿದ್ದರಾಮಯ್ಯ, ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ನೀವು ರಾಮನನ್ನು ಗುತ್ತಿಗೆ ಪಡೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.