ಯುವತಿಗೆ ಮಹಿಳಾ ಪಿಎಸ್ಸೈ ಕಪಾಳಮೋಕ್ಷ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
Update: 2021-03-09 20:59 IST
ಮಂಡ್ಯ, ಮಾ.9: ಸ್ಕೂಟರ್ ದಾಖಲಾತಿ ತಪಾಸಣೆ ವೇಳೆ ಮಹಿಳಾ ಪಿಎಸ್ಸೈ ಯುವತಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಗರದ ನೂರಡಿ ರಸ್ತೆಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಬೆಸಗರಹಳ್ಳಿ ರಾಮಣ್ಣ ವೃತ್ತದ್ದಲ್ಲಿ ಯುವತಿಯನ್ನು ತಡೆದ ಪೊಲೀಸರು ಸ್ಕೂಟರ್ ದಾಖಲಾತಿ ಪರಿಶೀಲಿಸುವಾಗ ಯುವತಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಯುವತಿ ಯಾರಿಗೋ ದೂರವಾಣಿ ಕರೆ ಮಾಡಿದ್ದಾಳೆ.
ಈ ವೇಳೆ ಪೊಲೀಸರು ಸ್ಕೂಟರ್ ಕೊಡು ನಿಮ್ಮ ತಂದೆಯವರ ಜತೆ ಪೊಲೀಸ್ ಸ್ಟೇಷನ್‍ಗೆ ಬಾ ಎಂದು ಹೇಳಿದ್ದಾರೆ. ಯುವತಿ ಸ್ಕೂಟರ್ ಕೊಡಲು ನಿರಾಕರಿಸಿದ ವೇಳೆ ಸಿಟ್ಟಾದ ಪಿಎಸ್ಸೈ ಸವಿತಾಗೌಡ ಎಂಬುವರು ಯುವತಿ ಕಪಾಳಕ್ಕೆ ಹೊಡೆದಿದ್ದಾರೆ.
ನಂತರ, ಯುವತಿ ಏಕವಚನದಲ್ಲಿ ಪಿಎಸ್ಸೈಯನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಇಬ್ಬರ ನಡುವೆಯೂ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನೆರೆದಿದ್ದ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿ ನಿಂತಿರುವುದು ವಿಡೀಯೋದಲ್ಲಿ ಸೆರೆಯಾಗಿದೆ.