×
Ad

ರಾಜ್ಯದ 28 ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ: ಕೋಟ್ಯಂತರ ರೂ. ಮೌಲ್ಯದ ಸಂಪತ್ತು ಪತ್ತೆ

Update: 2021-03-09 21:39 IST

ಬೆಂಗಳೂರು, ಮಾ.9: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ರಾಜ್ಯದ 11 ಜಿಲ್ಲೆಗಳಲ್ಲಿ ವಿವಿಧ ಸರಕಾರಿ ಇಲಾಖೆಯ 9 ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ ಒಟ್ಟು 28 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ಸಂಪತ್ತು ಪತ್ತೆಯಾಗಿದ್ದು, ಕೆಲ ಅಧಿಕಾರಿಗಳು ವಿದೇಶಿ ಪ್ರವಾಸ ಕೈಗೊಂಡಿರುವುದು ಬೆಳಕಿಗೆ ಬಂದಿದೆ.

ಮಂಗಳವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಭ್ರಷ್ಟಾಚಾರ ತನಿಖಾ ದಳದ 52 ಅಧಿಕಾರಿಗಳು, 174 ಸಿಬ್ಬಂದಿ ಸರಕಾರಿ ಅಧಿಕಾರಿಗಳ ಮನೆ, ಕಚೇರಿಗಳನ್ನು ಸತತವಾಗಿ ಶೋಧಿಸಿದರು. ಈ ವೇಳೆ, ದುಬಾರಿ ಬೆಲೆಯ ಮದ್ಯ, ಕೈ ಗಡಿಯಾರ, ಗೃಹೋಪಯೋಗಿ ವಸ್ತುಗಳು, ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಚರ ಮತ್ತು ಸ್ತಿರ ಆಸ್ತಿಗಳ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.

► ಯಾದಗಿರಿಯ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತರ್ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ, ಬಿ.ನಗರ, ಸಹರ ಕಾಲನಿಯಲ್ಲಿನ 1 ವಾಸದ ಮನೆ, 2 ಬೈಕ್, ಕಾರು, 676 ಗ್ರಾಂ ಚಿನ್ನಾಭರಣಗಳು, 1 ಕೆಜಿ 362 ಗ್ರಾಂ ಬೆಳ್ಳಿ ವಸ್ತುಗಳು, 1,71,000 ರೂ. ನಗದು ಮುಂಡರಗಿ ಗ್ರಾಮದಲ್ಲಿ 1 ಖಾಲಿ ನಿವೇಶನ, ಯಾದಗಿರಿ ಬಿ ನಗರದಲ್ಲಿ 7 ಖಾಲಿ ನಿವೇಶನಗಳು, ಯಾದಗಿರಿ ಜಿಲ್ಲೆ ಕೊಯಿಲೂರಾದಲ್ಲಿ 1 ಖಾಲಿ ನಿವೇಶನ, ಕಲಬುರಗಿ ಜಿಲ್ಲೆಯ ಶ್ರೀನಿವಾಸ ಶಾರದಾಗಿರಿಯಲ್ಲಿ 1 ಖಾಲಿ ನಿವೇಶನ, ಯಾದಗಿರಿ ಜಿಲ್ಲೆಯ ಅಶನಾಳ್ ಗ್ರಾಮದಲ್ಲಿ 3 ಎಕರೆ 27 ಗುಂಟೆ ಕೃಷಿ ಜಮೀನು.

ಬ್ಯಾಂಕ್ ಖಾತೆಗಳಲ್ಲಿ ಒಟ್ಟು 31,75,000 ರೂ. ಠೇವಣಿಗಳು, 5 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು, ತನಿಖೆಯಿಂದ ಆರೋಪಿತ ಸಾರ್ವಜನಿಕ ನೌಕರನು ತನ್ನ ಬಲ್ಲ ಮೂಲಗಳಿಗಿಂತ ಶೇ.223.44 ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ.

► ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಕೃಷ್ಣೇಗೌಡ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ, ಚಿಂತಾಮಣಿ ನಗರದಲ್ಲಿ 3 ಅಂತಸ್ತಿನ 1 ಮನೆ, ಕೋಲಾರದ ವೆಲಗಲಬುರ್ರೆ ಗ್ರಾಮದಲ್ಲಿನ 2 ಅಂತಸ್ತಿನ ಮನೆ, ಬೆಂಗಳೂರು ನಗರ ಯಲಹಂಕ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಹಲವು ಕಡೆ ಒಟ್ಟು 19 ಖಾಲಿ ನಿವೇಶನಗಳು, ಸುಮಾರು 24 ಎಕರೆ ಕೃಷಿ ಜಮೀನು, ವೆಲಗಲಬುರ್ರೆ ಗ್ರಾಮದಲ್ಲಿ 1 ಪೌಲ್ಟ್ರಿ ಫಾರಂ ಪತ್ತೆಯಾಗಿವೆ. ತನಿಖೆಯಿಂದ ಈತ ಶೇ.295.86 ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಕಂಡುಬಂದಿದೆ ಎಂದು ಎಸಿಬಿ ತಿಳಿಸಿದೆ.

► ಬೆಳಗಾವಿ ಸರ್ಕಲ್ ಉಪ ಮುಖ್ಯ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಹಣಮಂತ ಶಿವಪ್ಪ ಚಿಕ್ಕಣ್ಣನವರ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ, ಚೆನ್ನಮ್ಮಾ ನಗರದಲ್ಲಿ 1 ವಾಸದ ಮನೆ, ಬೆಳಗಾವಿ ನಗರದ ಶಾಂತಿ ಹೋಮ್ಸ್ ಅಪಾರ್ಟ್ ಮೆಂಟ್‍ನಲ್ಲಿ 2 ಫ್ಲಾಟ್‍ಗಳು ಮತ್ತು 1 ಪೆಂಟಾ ಹೌಸ್ ಹಾಗೂ 4 ವಾಣಿಜ್ಯ ಮಳಿಗೆಗಳು. ವಾಣಿಜ್ಯ ಮಳಿಗೆಗಳಲ್ಲಿ ಒಟ್ಟು 71,75,000 ರೂ. ಬೆಲೆಬಾಳುವ ವಸ್ತುಗಳು, 816 ಗ್ರಾಂ ಚಿನ್ನಾಭರಣ, 6 ಕೆಜಿ 317 ಗ್ರಾಂ ಬೆಳ್ಳಿ ಸಾಮಾನುಗಳು, 1,88,030 ರೂ. ನಗದು ಪತ್ತೆಯಾಗಿದೆ. ತನಿಖೆಯಿಂದ ಈತ ಅಧಿಕ ಅಸಮತೋಲನ ಆಸ್ತಿ ಹೊಂದಿರುವುದು ಕಂಡುಬಂದಿರುತ್ತದೆ.

► ಮೈಸೂರು ನಗರ ಮತ್ತು ಗ್ರಾಮಾಂತರ ಯೋಜನೆಯ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ. ವಡ್ಡರ್ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ, ಉಡುಪಿ ಜಿಲ್ಲೆ ಪುತ್ತೂರು ಗ್ರಾಮದಲ್ಲಿನ 1 ವಾಸದ ಮನೆ, 206 ಗ್ರಾಂ ಚಿನ್ನದ ವಡವೆಗಳು, 2.473ಕೆಜಿ ಬೆಳ್ಳಿ ಸಾಮಾನುಗಳು, 1,35,000 ರೂ.ನಗದು, ಒಂದು ಕಾರು, ಬೈಕ್, 15 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಇದುವರೆಗಿನ ತನಿಖೆಯಿಂದ ಆರೋಪಿತ ಸರಕಾರಿ ಅಧಿಕಾರಿ, ತನ್ನ ಬಲ್ಲ ಮೂಲಗಳಿಗಿಂತ ಶೇ82.33 ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಗೊತ್ತಾಗಿದೆ.

► ಮೈಸೂರು ಜಿಲ್ಲೆ ಚೆಸ್ಕಾಂ ಅಧೀಕ್ಷಕ ಅಭಿಯಂತರ ಮುನಿಗೋಪಾಲರಾಜು ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ, ಗೋಕುಲ ನಗರದಲ್ಲಿನ 1 ವಾಸದ ಮನೆ, ಮೈಸೂರು ಜಿಲ್ಲೆ, ಹೂಟಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಪ್ಲಾಟ್, ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 6 ನಿವೇಶನಗಳು, ಬೆಂಗಳೂರು ನಗರದ ಕೆಂಗೇರಿಯಲ್ಲಿನ ಅಪಾರ್ಟ್‍ಮೆಂಟ್‍ನಲ್ಲಿ 1 ಫ್ಲಾಟ್, ವಿವಿಧ ಕಡೆಗಳಲ್ಲಿ ಒಟ್ಟು 6.37 ಗುಂಟೆ ಕೃಷಿ ಜಮೀನು. 3 ಕಾರುಗಳು, 1 ದ್ವಿಚಕ್ರ ವಾಹನ, ಒಟ್ಟು 2,15,180 ರೂ. ನಗದು, 717 ಗ್ರಾಂ ಚಿನ್ನಾಭರಣ, 16 ಕೆ.ಜಿ.ಬೆಳ್ಳಿ ವಸ್ತುಗಳು, 50ಕ್ಕೂ ಹೆಚ್ಚು ಕಚೇರಿ ಮೂಲ ಕಡತಗಳು ಹಾಗೂ ಅದರೊಂದಿಗೆ ಇಟ್ಟಿದ್ದ 2,45,000 ರೂ. ನಗದು, ಸುಮಾರು20 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಇದುವರೆಗಿನ ತನಿಖೆಯಿಂದ ಈ ಅಧಿಕಾರಿ ಶೇ.196.27 ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ.

► ಮೈಸೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯ ಎಫ್‍ಡಿಎ ಚನ್ನವೀರಪ್ಪ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ, ಕುವೆಂಪು ನಗರದಲ್ಲಿನ 1 ವಾಸದ ಮನೆ, ಇವರ ಪತ್ನಿ ಹೆಸರಿನಲ್ಲಿ ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿನ ವಾಸದ ಮನೆ, ಮಂಡ್ಯ ಜಿಲ್ಲೆಯ ವಿವಿಧ ಕಡೆಗಳಲ್ಲಿ 2 ಖಾಲಿ ನಿವೇಶನಗಳು, ಮಂಡ್ಯ ಜಿಲ್ಲೆಯಲ್ಲಿ 34 ಗುಂಟೆ ಕೃಷಿ ಜಮೀನು, 1 ಕಾರು, 4 ಬೈಕ್, 275ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ವಸ್ತುಗಳು, 5 ಲಕ್ಷ ಮೊತ್ತದ ವಿಮಾ ಪಾಲಿಸಿಗಳು, 92,000 ರೂ. ನಗದು 13 ಲಕ್ಷ 50 ಸಾವಿರ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಈ ಅಧಿಕಾರಿ ಶೇ.149.51 ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ತನಿಖೆಯಿಂದ ಗೊತ್ತಾಗಿದೆ.

► ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್(ಬಿಎಂಟಿಎಫ್) ಪೊಲೀಸ್ ನಿರೀಕ್ಷಕ ವಿಕ್ಟರ್ ಸೈಮನ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ನ್ಯಾಷನಲ್ ಗೇಮ್ಸ್ ವಿಲೇಜ್‍ನಲ್ಲಿ 1 ಪ್ಲಾಟ್, ಮೈಸೂರಿನಲ್ಲಿನ ಸುಮಾರು 129 ಚ.ಅಡಿಯಲ್ಲಿನ ಬೃಹತ್ ಮನೆ, 2 ನಿವೇಶನ, ಹಂಪಾಪುರ ಹೋಬಳಿಯಲ್ಲಿ ಎರಡು ಕಡೆಗಳಲ್ಲಿ ಸುಮಾರು 10 ಎಕರೆ ಕೃಷಿ ಜಮೀನು, 1 ಕೋಟಿ ಬೆಲೆಯ ಬಾಂಡ್ ಪೇಪರ್, ಬ್ಯಾಂಕ್ ಲಾಕರ್ ಗಳಲ್ಲಿ ಸುಮಾರು 500 ಗ್ರಾಂ ಚಿನ್ನಾಭರಣ ಬೆಂಗಳೂರಿನ ವಾಸದ ಮನೆಯಲ್ಲಿ 7,26,000 ರೂ. ನಗದು, ವಿದೇಶಿ ಮದ್ಯ ಸೇರಿದಂತೆ ಸುಮಾರು 22.36 ಲೀ.ಮದ್ಯದ ಬಾಟಲ್‍ಗಳು, 1 ಕಾರು ಹಾಗೂ ಸುಮಾರು 21,61,000 ರೂ. ಬೆಲೆಬಾಳುವ ಗೃಯೋಪಯೋಗಿ ವಸ್ತುಗಳು ಪತ್ತೆಯಾಗಿದೆ. ಇವರು ಹಲವಾರು ಬಾರಿ ವಿದೇಶ ಪ್ರವಾಸ ಮಾಡಿರುವ ಬಗ್ಗೆ ದಾಖಲಾತಿಗಳು ಪತ್ತೆಯಾಗಿರುತ್ತವೆ. ಮೂಲಗಳಿಗಿಂತ ಶೇ 257.46 ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಕಂಡುಬಂದಿರುತ್ತದೆ.

► ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆ ಸಹಾಯಕ ನಿರ್ದೇಶಕ ಕೆ. ಸುಬ್ರಮಣ್ಯಂ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ ಬೆಂಗಳೂರಿನ ಸಹಕಾರ ನಗರದಲ್ಲಿನ 1 ವಾಸದ ಮನೆ, ಬೆಂಗಳೂರು ನಗರದ ವೈಟ್‍ಫೀಲ್ಡ್ ನಲ್ಲಿ 33 ಕೊಠಡಿಗಳ ಪಿಜಿ ಕಟ್ಟಡ, ಬೆಂಗಳೂರಿನ ವಿವಿಧ ಕಡೆ ಒಟ್ಟು 4 ನಿವೇಶನಗಳು, ಮೂರು ಕಾರು, ಒಂದು ಬೈಕ್, 531 ಗ್ರಾಂ ಚಿನ್ನಾಭರಣ, ಸುಮಾರು 8 ಕೆ.ಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿದೆ.

ಅದೇ ರೀತಿ, ವಿವಿಧ ಬ್ಯಾಂಕ್‍ಗಳಲ್ಲಿ ಸುಮಾರು 1 ಕೋಟಿ ಠೇವಣಿ ಹಾಗೂ 31,90,000 ರೂ. ಬೆಲೆ ಬಾಳುವ ಗೃಯೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ಇವರು ಹಲವಾರು ಬಾರಿ ವಿದೇಶ ಪ್ರವಾಸ ಮಾಡಿರುವ ಬಗ್ಗೆ ದಾಖಲಾತಿಗಳು ಪತ್ತೆಯಾಗಿದ್ದು, ಇವರು ಶೇ.364.00 ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಗೊತ್ತಾಗಿದೆ.

► ಹಾವೇರಿ ಜಿಲ್ಲೆಯ ಫ್ಯಾಕ್ಟರೀಸ್ ಮತ್ತು ಬಾಯ್ಲರ್ಸ್ ವಿಭಾಗದ ಉಪನಿರ್ದೇಶಕ ಕೆ.ಎಂ.ಪ್ರಥಮ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ, ಬೆಂಗಳೂರಿನ ಸಂಜಯನಗರದಲ್ಲಿ 2 ವಾಸದ ಮನೆ, 52,000 ರೂ. ನಗದು, 400 ಗ್ರಾಂ ಚಿನ್ನಾಭರಣ, 69 ಗ್ರಾಂ ಬೆಳ್ಳಿ ಸಾಮಾನುಗಳು, ವಿವಿಧ ಕಂಪೆನಿಯ 2 ಕಾರುಗಳು, 2 ಬೈಕ್ 25 ಲಕ್ಷ  ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ಇದುವರೆಗಿನ ತನಿಖೆಯಿಂದ ಈತ  ಶೇ. 118.00 ರಷ್ಟು ಅಸಮತೋಲನ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ ಎಂದು ಎಸಿಬಿ ಅಧಿಕೃತ ಮೂಲಗಳು ದೃಢಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News