ನನ್ನನ್ನು ಕೊಂದರೂ ಸರಿ, ಮಕ್ಕಳನ್ನು ಬಿಟ್ಟು ಬಿಡಿ: ಮ್ಯಾನ್ಮಾರ್‌ ಸೇನೆಯೊಂದಿಗೆ ಕ್ರೈಸ್ತ ಸನ್ಯಾಸಿನಿ ಮನವಿ

Update: 2021-03-09 16:11 GMT

ಕಚಿನ್‌,ಮಾ.9: ಮ್ಯಾನ್ಮಾರ್‌ ನಲ್ಲಿ ಸೇನಾಡಳಿತವು ಅಲ್ಲಿನ ನಾಗರಿಕರ ವಿರುದ್ಧ ದೌರ್ಜನ್ಯವೆಸಗುತ್ತಿದ್ದು, ಈಗಾಗಲೇ ಹಲವಾರು ಪ್ರತಿಭಟನಕಾರರು ಸೇನೆಯ ಗುಂಡೇಟಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇದೀಗ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲೆತ್ನಿಸಿದ ಸೈನಿಕರ ಮುಂದೆ ಕ್ರೈಸ್ತ ಸನ್ಯಾಸಿನಿಯೋರ್ವರು ಮಂಡಿಯೂರಿ ಕುಳಿತು ಮನವಿ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಪ್ರತಿಭಟನೆಯಲ್ಲಿ ಮಕ್ಕಳು ಕೂಡಾ ಭಾಗವಹಿಸಿದ್ದು, ಸೈನಿಕರು ಮಕ್ಕಳ ಕಡೆಗೆ ಗುಂಡು ಹಾರಿಸಲು ಯತ್ನಿಸಿದಾಗ ಆನ್ ರೋಸ್ ನು ತಾವ್ಂಗ್  ಎಂಬ ಸನ್ಯಾಸಿನಿಯು ಅವರ ಮುಂದೆ ಮಂಡಿಯೂರಿ ಕೈಮುಗಿದು "ಮಕ್ಕಳ ಕಡೆಗೆ ಗುಂಡು ಹಾರಿಸದಿರಿ, ನನ್ನ ಮೇಲೆ ಗುಂಡು ಹಾರಿಸಿ" ಎನ್ನುವ ವೀಡಿಯೋ ಸದ್ಯ ವೈರಲ್‌ ಆಗಿದೆ. 

""ನನ್ನ ಕಣ್ಣೆದುರಿನಲ್ಲೇ ಸೈನಿಕರ ಗುಂಡಿಗೆ ಎರಡು ಜೀವಗಳು ಬಲಿಯಾಯಿತು. ಬಳಿಕ ಅವರು ಮಕ್ಕಳ ಮೇಲೆ ಗುಂಡು ಹಾರಿಸಲು ಯತ್ನಿಸಿದಾಗ ನಾನು ವಿಚಲಿತಗೊಂಡೆ. ಮಕ್ಕಳಿಗೆ ಏನೂ ಆಗದಿರಲಿ ಎಂದು ನಾನು ಮನದಲ್ಲೇ ಪ್ರಾರ್ಥಿಸಿದೆ. ಮಕ್ಕಳ ವಿರುದ್ಧ ದಾಳಿ ನಡೆಸಬೇಡಿ, ಅದರ ಬದಲು ನನ್ನನ್ನು ಗುಂಡಿಕ್ಕಿ ಕೊಂದು ಬಿಡಿ ಎಂದಾಗ ಸೈನಿಕರು ತಮ್ಮ ಬಂದೂಕಿನ ಗುರಿಯನ್ನು ಬೇರೆಡೆಗೆ ತಿರುಗಿಸಿದರು" ಎಂದು 45ರ ಹರೆಯದ ನನ್ ʼಆನ್ ರೋಸ್ ನ ತಾಂವ್ಗ್ʼ  ಹೇಳಿಕೆ ನೀಡಿದ್ದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಸದ್ಯ ಈ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದ್ದು, ಸನ್ಯಾಸಿನಿಯ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor