ಬೇಡಿಕೆ ಈಡೇರದಿದ್ದರೆ ಎಪ್ರಿಲ್ 8ರಿಂದ ರಾಜ್ಯಾದ್ಯಂತ ಬಸ್ ಮುಷ್ಕರ: ಸಾರಿಗೆ ನೌಕರರಿಂದ ಸರಕಾರಕ್ಕೆ ಎಚ್ಚರಿಕೆ
ಬೆಂಗಳೂರು, ಮಾ. 9: ಸಾರಿಗೆ ಇಲಾಖೆಯಲ್ಲಿ 1.30 ಲಕ್ಷ ನೌಕರರು ಇದ್ದಾರೆ. ಅವರ ಭವಿಷ್ಯಕ್ಕೆ ಬಜೆಟ್ ನಲ್ಲಿ ಯಾವುದೇ ಅವಕಾಶ ನೀಡಿಲ್ಲ. ಡಿ.14ರಲ್ಲಿ ನೀಡಿದ್ದ ಭರವಸೆ ಈಡೇರಿಲ್ಲ. 3 ತಿಂಗಳ ಕಾಲಾವಕಾಶ ಮುಗಿಯುತ್ತಿದೆ. ಮಾ.16ಕ್ಕೆ ಕಾರ್ಮಿಕ ಇಲಾಖೆಗೆ ನೋಟಿಸ್ ಕೊಡುತ್ತೇವೆ. ಅದಾದ ಬಳಿಕ 22 ದಿನಗಳ ನಂತರವೂ ಸರಕಾರ ಸ್ಪಂದಿಸದೇ ಹೋದರೆ. ಎ.8ರಿಂದ ಸಾರಿಗೆ ನೌಕರರ ಮುಷ್ಕರ ಆರಂಭವಾಗಲಿದೆ ಎಂದು ಸಾರಿಗೆ ನೌಕರರ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ನಲ್ಲಿ ನಾಲ್ಕು ದಿನಕಾಲ ಸಾರಿಗೆ ಮುಷ್ಕರದಲ್ಲಿ ನೌಕರರ ಹತ್ತು ಬೇಡಿಕೆಯಲ್ಲಿ ಒಂಬತ್ತು ಬೇಡಿಕೆಯನ್ನು ಈಡೇರಿಸುತ್ತೇವೆ, ಸ್ವಲ್ಪ ದಿನ ಕಾಲಾವಕಾಶ ಕೊಡಿ ಎಂದು ಸರಕಾರ ಮನವಿ ಮಾಡಿಕೊಂಡಿತ್ತು. ಅದರಂತೆ ಸಾರಿಗೆ ನೌಕರರು ಮೂರು ತಿಂಗಳು ಗಡುವು ನೀಡಿತ್ತು. ಆದರೆ, ಗಡುವು ಮುಗಿದರೂ ಸರಕಾರ ಯಾವುದೇ ಸ್ಪಂದನೆ ನೀಡ್ತಿಲ್ಲ. ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಬಜೆಟ್‍ನಲ್ಲಿ ನೌಕರರ ಬೇಡಿಕೆ ಬಗ್ಗೆ ಯಾವುದೇ ಯೋಜನೆ ನೀಡಲಿಲ್ಲ. ಹೀಗಾಗಿ ಮತ್ತೆ ಸರಕಾರದ ವಿರುದ್ಧ ನೌಕರರು ಸಿಡಿದೆದ್ದಿದ್ದಾರೆ ಎಂದರು.
ಸಾರಿಗೆ ನೌಕರರ ಹಾಗೂ ಸರಕಾರದ ನಡುವೆ ಜಟಾಪಟಿ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನದಲ್ಲಿ ನಿನ್ನೆ ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಮನ್ನಣೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ಹೋರಾಟಗಾರರು ಎಪ್ರಿಲ್ 8 ರವರೆಗೆ ಸರಕಾರಕ್ಕೆ ಮತ್ತೆ ಗಡುವು ನೀಡಿದ್ದಾರೆ. ಅಷ್ಟರಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ ಮತ್ತೊಮ್ಮೆ ಸಾರಿಗೆ ನೌಕರರು ಬಸ್ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದರು.
ಸರಕಾರ ಸಾರಿಗೆ ನೌಕರರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಬಜೆಟ್ ನಲ್ಲಿ ನಮ್ಮನ್ನು ನಿರ್ಲಕ್ಷಿಸಿದ್ದು ಭಾರೀ ನಿರಾಶೆಯಾಗಿದೆ. ಎಪ್ರಿಲ್ 8ರ ನಂತರ ಪ್ರತಿಭಟನೆ ನಡೆಸುತ್ತೇವೆ. ಈ ಬಾರಿ ಕುಟುಂಬ ಸದಸ್ಯರೊಂದಿಗೆ ಸಾರಿಗೆ ನೌಕರರು ಬೀದಿಗಿಳಿಯುತ್ತಾರೆ.
-ಚಂದ್ರಶೇಖರ್, ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ