×
Ad

ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಜಾರಕಿಹೊಳಿ ಮೈತ್ರಿ ಸರಕಾರ ಪತನಗೊಳಿಸಬೇಕಿತ್ತೇ?: ಕುಮಾರಸ್ವಾಮಿ

Update: 2021-03-09 22:01 IST

ಬೆಂಗಳೂರು, ಮಾ. 9: ‘ಮಾಧ್ಯಮಗಳ ಮುಂದೆ ಸಿಡಿಗಳಿವೆ ಎಂದು ಹೇಳಿಕೆ ನೀಡುವವರನ್ನು ರಾಜ್ಯ ಸರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಈವರೆಗೆ ಅವರನ್ನು ಏಕೆ ಬಂಧಿಸಿಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣ ಮುಂದಿಟ್ಟುಕೊಂಡು ರಾಜಕೀಯ ದುರ್ಬಳಕೆ ಮಾಡಿಕೊಳ್ಳಲು ನಾನು ಅಥವಾ ನಮ್ಮ ಕುಟುಂಬ ಬೇರೊಬ್ಬರ ತೇಜೋವಧೆಗೆ ಯಾವುದೇ ಕಾರಣಕ್ಕೂ ಕೈ ಹಾಕುವುದಿಲ್ಲ ಎಂದು ಹೇಳಿದರು.

ನಾಲ್ಕು ಗೋಡೆ ಮಧ್ಯೆ ನಡೆದಿರುವುದನ್ನು ದಾಖಲಿಸಿ ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಕಾನೂನು ಬಾಹಿರವಲ್ಲವೇ? ಆ ಸಿಡಿ ಅಸಲಿಯೋ, ನಕಲಿಯೋ? ಆದರೆ, ತೇಜೋವಧೆಯಂತೂ ಆಗಿದೆ. ಸಿಡಿ ಪ್ರಕರಣದಂತಹ ತೇಜೋವಧೆಯಾಗುವುದನ್ನು ತಡೆಯಲು ಸರಕಾರ ಏನು ಕಾನೂನು ರೂಪಿಸಲಿದೆಯೋ ರೂಪಿಸಲಿ. ಕಾನೂನು ರಚನೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.

ಯಾರೂ ಅವರು: ರಮೇಶ್ ಜಾರಕಿಹೊಳಿ ಹೇಳಿರುವುದು ಬಾಂಬೆಗೆ ಕರೆದುಕೊಂಡು ಹೋದ ಇಬ್ಬರು, ಬಾಂಬೆಯಲ್ಲಿ ನೋಡಿಕೊಂಡವರು ಮೂರು ಜನರೋ, ಅಲ್ಲಿಂದ ಕರೆದುಕೊಂಡು ಬಂದವರು ನಾಲ್ಕು ಜನವೋ ಗೊತ್ತಿಲ್ಲ. ಅವರನ್ನೇ ಕೇಳಬೇಕು. ಸಿಡಿ ಪ್ರಕರಣದಲ್ಲಿ ನೂರಾರು ಕೋಟಿ ರೂ.ವ್ಯವಹಾರ ನಡೆದಿದೆ ಎಂದು ಜಾರಕಿಹೊಳಿ ಅವರೇ ಆಪಾದಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ರಮೇಶ್ ಜಾರಕಿಹೊಳಿ ಅವರು ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಳಿಸಬೇಕಿತ್ತೇ? ಬಿಜೆಪಿಗೆ ಸೇರಬೇಕಿತ್ತೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮೈತ್ರಿ ಸರಕಾರ ಉಳಿಸಿಕೊಳ್ಳಲು ನಾನು ಆಗ ಕೈಹಾಕಲಿಲ್ಲ. ಆ ಸಂದರ್ಭದಲ್ಲಿ ಅಮೆರಿಕ ಪ್ರವಾಸದಲ್ಲಿದ್ದೆ. ಈ ಹಿಂದೆಯೂ ಬಿಜೆಪಿ ಸರಕಾರದಲ್ಲಿನ ಅಸಮಾಧಾನಿತ ಶಾಸಕರು ಗೋವಾ ಸೇರಿ ಬೇರೆ ಸ್ಥಳಗಳಲ್ಲಿದ್ದರು. ಆಗ ಸಿಡಿಗಳೇಕೆ ಬರಲಿಲ್ಲ ಎಂದು ಕೇಳಿದರು.

ಬಹಿರಂಗಗೊಳ್ಳಲಿಲ್ಲ ಏಕೆ?: ಸಿಡಿ ಪ್ರಕರಣದಿಂದ ಸಂತ್ರಸ್ತರಾದವರು ಯಾರು? ಸಿಡಿ ಪ್ರಕರಣ ಬೆಳಕಿಗೆ ಬಂದು ಆರು ದಿನವಾದರೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕಿತ್ತಲ್ಲವೇಕೆ? ಸಿಡಿ ಪ್ರಕರಣ ಅಸಲಿಯೋ ನಕಲಿಯೋ, ಸಂತ್ರಸ್ತರಾದವರು ಯಾರು ಎಂದ ಕುಮಾರಸ್ವಾಮಿ, ತಮ್ಮ ವಿರುದ್ಧ ಆಕ್ಷೇಪಾರ್ಹ ಸುದ್ದಿಗಳನ್ನು ಬಿತ್ತರಸಬಾರದೆಂದು ಕೋರ್ಟ್ ಮೊರೆ ಹೋಗಿರುವವರು ಮೇಧಾವಿಗಳು ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News