×
Ad

68 ಗ್ರಾ.ಪಂ.ಗಳ 669 ಸದಸ್ಯ ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟ

Update: 2021-03-09 22:02 IST

ಬೆಂಗಳೂರು, ಮಾ.9: ಪ್ರಸ್ತುತ ವಾರ್ಷಿಕ ಸಾಲಿನ ಮೇ ತಿಂಗಳಿಗೆ ಅವಧಿ ಮುಕ್ತಾಯವಾಗಲಿರುವ ರಾಜ್ಯ ವ್ಯಾಪಿಯ 68 ಗ್ರಾಮ ಪಂಚಾಯತ್ ನ ವಿವಿಧ ಕಾರಣಗಳಿಂದ ಖಾಲಿಯಿರುವ 669 ಸದಸ್ಯ ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿ ರಾಜ್ಯ ಚುನಾವಣಾ ಆಯೋಗವೂ ಅಧಿಸೂಚನೆ ಹೊರಡಿಸಿದೆ.

ಚುನಾವಣೆ ಸಂಬಂಧ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಾ.15ರಂದು ಚುನಾವಣಾ ಪ್ರಕ್ರಿಯೆ ಕುರಿತು ಅಧಿಸೂಚನೆ ಪ್ರಕಟಿಸಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲು ಮಾ.19 ಕೊನೆಯ ದಿನವಾಗಿದೆ. ಅದೇ ರೀತಿ, ಮಾ.20ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಜರುಗಲಿದ್ದು, ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಮಾ.22ರಂದು ಅಂತಿಮ ದಿನವಾಗಿದೆ.

ಮಾ.29ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮಾ.30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದೆ. ಮುಖ್ಯವಾಗಿ ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾ.15ರಿಂದ ಮಾ.31ರವರೆಗೂ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುತ್ತದೆ.

ವಿಶೇಷವಾಗಿ ಬೀದರ್ ಗ್ರಾಮ ಪಂಚಾಯತ್ ಗಳಿಗೆ ಇಸಿಐಎಲ್ ಹೈದರಾಬಾದ್ ಅವರು ತಯಾರಿಸಿರುವ ಮಲ್ಟಿಚಾಯ್ಸ್ ವಿದ್ಯುನ್ಮಾನ ಮತ ಯಂತ್ರದ(ಇವಿಎಂ) ಮೂಲಕ ಚುನಾವಣೆ ನಡೆಸಲು ಆದೇಶಿಸಲಾಗಿದೆ. ಜತೆಗೆ ಚುನಾವಣಾಧಿಕಾರಿಗಳು(ಆರ್‍ಒ) ಚುನಾವಣೆ ನಡೆಯುವ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಚುನಾವಣಾ ಪ್ರಕ್ರಿಯೆಗಳ ವಿಡಿಯೊಗ್ರಾಫಿಕ್ ಚಿತ್ರೀಕರಣ ಮಾಡಿಸಬೇಕು. ಮತದಾನ ಪ್ರಕ್ರಿಯೆ ದಿನದಂದು ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಬೇಕು. ಪ್ರಧಾನವಾಗಿ ಈ ಗ್ರಾಮ ಪಂಚಾಯತ್ ಚುನಾವಣೆಗಳ ಮತಪತ್ರದಲ್ಲಿ ‘ನೋಟಾ’ ಆಯ್ಕೆಗೆ ಅವಕಾಶವಿಲ್ಲ ಎಂದು ರಾಜ್ಯ ಚುನಾವಣೆ ಆಯೋಗ ಪ್ರಕಟನೆಯಲ್ಲಿ ಹೇಳಿದೆ.

ಪಟ್ಟಣ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ

ತುಮಕೂರಿನ ಹುಳಿಯಾರು ಪಟ್ಟಣ, ಮೈಸೂರು ಜಿಲ್ಲೆಯ ಸರಗೂರು ಪಟ್ಟಣ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಉಳಿದಿರುವ 27 ವಾರ್ಡ್ ಗಳ ಚುನಾವಣೆಗೂ ಸಹ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.

ಮಾ.17ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.18ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಮಾ.20 ಕೊನೆಯ ದಿನವಾದರೆ, ಮಾ.29ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ. ಚುನಾವಣೆ ನಡೆಯುವ ಸ್ಥಳೀಯ ಸಂಸ್ಥೆಗಳು ಮತ್ತು ವಾರ್ಡ್ ಗಳಲ್ಲಿ ಇಂದಿನಿಂದ(ಮಾ.10) ಮಾ.31ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಆಯೋಗವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News