×
Ad

ಪೆಟ್ರೋಲ್ ದರ ರಾಮನ ಭಾರತದಲ್ಲಿ 93 ರೂ., ರಾವಣನ ಲಂಕೆಯಲ್ಲಿ 51 ರೂ.: ಸಿದ್ದರಾಮಯ್ಯ

Update: 2021-03-09 23:15 IST

ಬೆಂಗಳೂರು, ಮಾ.9: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮುಖ್ಯ ಕಾರಣ. ಪೆಟ್ರೋಲ್ ಬೆಲೆ ರಾಮನ ಭಾರತದಲ್ಲಿ 93 ರೂ., ಸೀತೆಯ ನೇಪಾಳದಲ್ಲಿ 53 ರೂ. ಹಾಗೂ ರಾವಣನ ಲಂಕೆಯಲ್ಲಿ 51 ರೂ.ಇದೆ ಅಂತ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯಂ ಸ್ವಾಮಿ ಅವರೇ ತಮ್ಮ ಟ್ವೀಟ್ ನಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆ ಇದೆಯಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಗಳವಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಅಡಿಯಲ್ಲಿ ಮಾತನಾಡಿದ ಅವರು, ಈ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಷ್ಕರುಣೆಯಿಂದ ಹೇರುತ್ತಿರುವ ತೆರಿಗೆಗಳು ಕಾರಣ. ಬಿಜೆಪಿಯ ದುರಾಡಳಿತಕ್ಕೆ ಸಿಕ್ಕಿ ದೇಶದ ಜನ ನರಳಾಡುತ್ತಿದ್ದಾರೆ ಎಂದು ಕಿಡಿಗಾರಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ಭಾರತ್ ಮಾತಾಕೀ ಜೈ ಹಾಗೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಆಡಳಿತ ಪಕ್ಷವನ್ನು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಕೊನೆಗೂ ನಿಮ್ಮ ಬಾಯಲ್ಲಿ ಜೈ ಶ್ರೀರಾಮ ಎಂದು ಕೇಳಿ ಖುಷಿ ಆಯಿತು ಎಂದರು.

ಆಗ ತಮ್ಮ ಮಾತು ಮುಂದುವರೆಸಿದ ಸಿದ್ದರಾಮಯ್ಯ, ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ನೀವು ರಾಮನನ್ನು ಗುತ್ತಿಗೆ ಪಡೆದುಕೊಂಡಿದ್ದೀರಾ? ಎಂದರು. ಆಗ ಕಾಂಗ್ರೆಸ್ ಸದಸ್ಯರು ಸಿದ್ದರಾಮಯ್ಯ ಮಾತಿಗೆ ದನಿ ಗೂಡಿಸುವ ಮೂಲಕ ನಾವು ರಾಮನ ಹೆಸರನ್ನು ರಾಜಕೀಯಕ್ಕೆ ಬಳಕೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯನವರೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ನೀವು ದೇಣಿಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ನಮ್ಮ ಊರಿನಲ್ಲಿ ಕಟ್ಟಿಸುತ್ತಿರುವ ರಾಮ ಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ ಎಂದರು.

ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‍ಗೆ 125 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ 57 ರೂಪಾಯಿ ಇತ್ತು. ಈಗ ಕಚ್ಚಾತೈಲ ಬೆಲೆ ಬ್ಯಾರಲ್‍ಗೆ ಕೇವಲ 54.77 ಡಾಲರ್ ಇರುವಾಗ ಪೆಟ್ರೋಲ್ ಬೆಲೆ 94ರಿಂದ 100 ರೂಪಾಯಿ ಆಗಿದೆ. ಬಿಜೆಪಿಯವರೇ ಇದೇನಾ ನಿಮ್ಮ ಅಚ್ಚೇ ದಿನ್? ಎಂದು ಪ್ರಶ್ನಿಸಿದರು.

ಕಳೆದ ವರ್ಷ ಇದೇ ದಿನ ದೇಶದಲ್ಲಿ ಪೆಟ್ರೋಲ್‍ಗೆ 75 ರೂ. ಹಾಗೂ ಡೀಸೆಲ್‍ಗೆ 67 ರೂ.ಇತ್ತು. ಒಂದೇ ವರ್ಷದಲ್ಲಿ ಸುಮಾರು 20 ರೂ.ಏರಿದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ತುಸು ಏರಿಕೆಯಾದರೂ ಪ್ರತಿಭಟಿಸುತ್ತಿದ್ದ ಬಿಜೆಪಿ ನಾಯಕರು ಈಗೆಲ್ಲಿ ಅಡಗಿ ಕೂತಿದ್ದಾರೆ? ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕಾರಣ ಎಂದು ಸಬೂಬು ಕೊಡುವ ಬಿಜೆಪಿ ನಾಯಕರು, ಮೋದಿ ಅಧಿಕಾರಕ್ಕೆ ಬಂದರೆ ಡಾಲರ್ ಮೌಲ್ಯವನ್ನು 20 ರೂ. ಗಳಿಗೆ ಇಳಿಸ್ತೀವಿ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಾತನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿದರು.

2013 ರಲ್ಲಿ ಒಂದು ಡಾಲರ್ ಮೌಲ್ಯ 54.94 ರೂಪಾಯಿಯಾಗಿತ್ತು. ಇಂದು ಡಾಲರ್ ಮೌಲ್ಯ 73 ರೂಪಾಯಿಯಾಗಿದೆ. 2014ರ ನಂತರ ರೂಪಾಯಿ ಮೌಲ್ಯ ಕುಸಿಯಲು ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತ ಕಾರಣವಲ್ಲವೇ? ಕೇಂದ್ರ ಸರಕಾರ 2015 ರಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮೇಲೆ 9.20 ರೂ. ಹಾಗೂ ಡೀಸೆಲ್ ಮೇಲೆ 3.45 ರೂ.ಅಬಕಾರಿ ಸುಂಕ ವಿಧಿಸುತ್ತಿತ್ತು. ಈ ವರ್ಷ ಪೆಟ್ರೋಲ್ ಮೇಲೆ 32.98 ರೂ.ಹಾಗೂ ಡೀಸೆಲ್ ಮೇಲೆ 31.84 ರೂ.ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಹಾಗಾದರೆ ಪೆಟ್ರೋಲ್ ಬೆಲೆ ಏರಿಕೆಗೆ ಹಿಂದಿನ ಸರಕಾರ ಕಾರಣವೋ ಅಥವಾ ತೆರಿಗೆ ಹಚ್ಚಳವೋ? ಎಂದು ಅವರು ಪ್ರಶ್ನಿಸಿದರು.

2013-14 ರಲ್ಲಿ ಭಾರತ 184 ಮಿಲಿಯನ್ ಟನ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿತ್ತು, ಇದು 2019-20 ರಲ್ಲಿ 228 ಮಿಲಿಯನ್ ಟನ್‍ಗೆ ಏರಿಕೆಯಾಗಿದೆ. ಕಚ್ಚಾತೈಲ ಆಮದಿನಲ್ಲಿ ಶೇ.10 ಕಡಿಮೆಯಾದರೂ ದೇಶ ಅಭಿವೃದ್ಧಿಯಾಗಿಬಿಡುತ್ತೆ ಅಂದಿದ್ದ ಮೋದಿಯವರು ಕಚ್ಚಾತೈಲಕ್ಕಾಗಿ ವಿದೇಶಿ ಅವಲಂಬನೆ ಕಡಿಮೆ ಮಾಡಲು ಈವರೆಗೆ ಮಾಡಿದ್ದಾದರೂ ಏನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News