ಖುದ್ದು ಠಾಣೆಗೆ ಹಾಜರಾಗಿ ದೂರು ವಾಪಸ್ಸು ಪಡೆದೆ: ದಿನೇಶ್ ಕಲ್ಲಹಳ್ಳಿ

Update: 2021-03-10 17:04 GMT

ಬೆಂಗಳೂರು, ಮಾ.10: ಮಾಜಿ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ಖುದ್ದು ನಾನೇ ಠಾಣೆಗೆ ಹಾಜರಾಗಿ ದೂರನ್ನು ವಾಪಸ್ಸು ಪಡೆದಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ವಾಪಸ್ಸು ಪಡೆಯಲು ಈ ಹಿಂದೆಯೇ ಕಾರಣಗಳನ್ನು ತಿಳಿಸಿದ್ದು, ಕಾನೂನು ರೀತಿ ನನ್ನ ವಕೀಲರು ಠಾಣೆಗೂ ಮಾಹಿತಿ ನೀಡಿದ್ದಾರೆ. ಹಾಗಾಗಿ, ಸ್ವತಃ ನಾನೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರನ್ನು ವಾಪಸ್ಸು ಪಡೆದಿದ್ದೇನೆ ಎಂದು ತಿಳಿಸಿದರು.

ಸಿಡಿ ಪ್ರಕರಣದ ಕಾನೂನು ಹೋರಾಟಕ್ಕೆ ನಾನು ಸಿದ್ಧನಿದ್ದೇನೆ ಎಂದ ಅವರು, ಮಾನಸಿಕವಾಗಿ ಹಾಗೂ ಹಲವು ಮಾಧ್ಯಮಗಳಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಗುರುತರ ಆರೋಪಗಳಿಂದ ನಾನು ಮೊದಲು ಮುಕ್ತನಾಗಬೇಕು. ಹಲವು ಜನ ನನ್ನ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ. ಯಾರಾದರೂ ದಾಖಲೆಗಳನ್ನಿಟ್ಟು ಆರೋಪ ಮಾಡಿದರೆ ನಾನು ಯಾವುದೇ ಹೋರಾಟ ಮಾಡುವುದಿಲ್ಲ ಎಂದರು.

ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಕಳುಹಿಸುವೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾನೂನಾತ್ಮಕವಾಗಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಅವರು ಹೋರಾಟ ಮಾಡಲಿ, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಉತ್ತರಿಸಿದರು.

ಈ ಪ್ರಕರಣದಲ್ಲಿ ಈವರೆಗೆ ಎಷ್ಟು ಮಟ್ಟದ ತನಿಖೆಯಾಗಿದೆ. ಯಾವೆಲ್ಲ ಮಾಹಿತಿ ಕಲೆ ಹಾಕಲಾಗಿದೆ. ಅದೇ ರೀತಿ, ಸಿಬಿಐ, ಸಿಐಡಿ ಅಥವಾ ಎಸ್‍ಐಟಿಗೆ ತನಿಖೆ ಜವಾಬ್ದಾರಿ ವಹಿಸುವ ಅಂತಿಮ ತೀರ್ಮಾನದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News